ನವದೆಹಲಿ: ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಶುಕ್ರವಾರದಿಂದ 3,000 ರೂ.ಗಳ ವಾರ್ಷಿಕ ಫಾಸ್ಟ್ಯಾಗ್ ಪಾಸ್ ಜಾರಿಗೊಳಿಸಿದೆ. ಶುಕ್ರವಾರ ಅಪರಾಹ್ನ 4.30ರವರೆಗೆ 1.2 ಲಕ್ಷ ಜನರು ಈ ಪಾಸ್ ಖರೀದಿಸಿದ್ದು, ಸುಮಾರು ಅಷ್ಟೇ ಸಂಖ್ಯೆಯ ವಹಿವಾಟುಗಳು ಟೋಲ್ ಪ್ಲಾಜಾಗಳಲ್ಲಿ ದಾಖಲಾಗಿವೆ ಎಂದು ಎನ್ಎಚ್ಎಐ ತಿಳಿಸಿದೆ.
ರಾಜಮಾರ್ಗ ಯಾತ್ರಾ ಆಪ್ ಅಥವಾ ಎನ್ಎಚ್ಎಐ/ ಎಂಒಆರ್ಟಿಎಚ್ ಅಧಿಕೃತ ವೆಬ್ಸೈಟ್ನಲ್ಲಿ ಈ ಪಾಸನ್ನು ಖರೀದಿಸಬಹುದು. ವಾಹನ ಸಂಖ್ಯೆ ಮತ್ತು ಪ್ರಸ್ತುತ ಫಾಸ್ಟ್ಯಾಗ್ ಐಡಿ ನಮೂದಿಸಿ ಲಾಗಿನ್ ಮಾಡಬೇಕು.
ವಾಹನ ನೋಂದಣಿ ಸಂಖ್ಯೆ (ವೆಹಿಕಲ್ ರಿಜಿಸ್ಟ್ರೇಷನ್ ನಂಬರ್- ವಿಆರ್ಎನ್), ಸಕ್ರಿಯ ಫಾಸ್ಟ್ಯಾಗ್ ಮತ್ತು ಕೆವೈಸಿ ಪೂರ್ಣಗೊಂಡಿರಬೇಕು. ಯುಪಿಐ, ಕ್ರೆಡಿಟ್ ಕಾರ್ಡ್ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ 3,000 ರೂ. ಪಾವತಿಸಬೇಕು. ನಂತರ, ಅಸ್ತಿತ್ವದಲ್ಲಿರುವ ಫಾಸ್ಟ್ಯಾಗ್ಗೆ ಪಾಸ್ ಲಿಂಕ್ ಆಗುತ್ತದೆ. ಎಸ್ಸೆಮ್ಮೆಸ್ ಮೂಲಕ ದೃಢೀಕರಣ ಬರುತ್ತದೆ.
ಈ ಪಾಸ್ ಕೇವಲ ಖಾಸಗಿ, ವಾಣಿಜ್ಯೇತರ ವಾಹನಗಳಿಗೆ ಲಭ್ಯವಿದೆ. ಚಾಸಿಸ್ ಸಂಖ್ಯೆಗೆ ಲಿಂಕ್ ಆಗಿರುವ ಫಾಸ್ಟ್ಯಾಗ್ಗಳು ಅರ್ಹವಲ್ಲ. ವಿಆರ್ಎನ್ ನವೀಕರಣ ಅಗತ್ಯ. ಫಾಸ್ಟ್ಯಾಗ್ ಕಪ್ಪುಪಟ್ಟಿಯಲ್ಲಿ ಇರಬಾರದು.
ಖರೀದಿಸಿದ ದಿನಾಂಕದಿಂದ ಒಂದು ವರ್ಷದವರೆಗೆ ಅಥವಾ 200 ಟೋಲ್ ಕ್ರಾಸಿಂಗ್ಗಳಿಗೆ ಈ ಪಾಸ್ ವ್ಯಾಲಿಡ್ ಆಗಿರುತ್ತದೆ. (ಯಾವುದು ಮೊದಲು ಬರುತ್ತದೆಯೋ ಅದು). ಒಂದು ಟೋಲ್ ದಾಟಿದರೆ ಒಂದು ಟ್ರಿಪ್ ಎಂದು ಲೆಕ್ಕ. 200 ಟ್ರಿಪ್ಗಳು ಮುಗಿದರೆ, ವರ್ಷ ಮುಗಿಯದಿದ್ದರೂ ಮತ್ತೆ 3,000 ರೂ. ಪಾವತಿಸಿ ರೀಚಾರ್ಜ್ ಮಾಡಿಕೊಳ್ಳಬೇಕು.
ರಾಷ್ಟ್ರೀಯ ಹೆದ್ದಾರಿಗಳಲ್ಲಿ ಹೆಚ್ಚು ಸಂಚರಿಸುವವರಿಗೆ ಈ ಪಾಸ್ನಿಂದ ಪ್ರತಿ ವರ್ಷ 5 ಸಾವಿರದಿಂದ 7 ಸಾವಿರ ರೂ.ವರೆಗೆ ಉಳಿತಾಯವಾಗುತ್ತದೆ. ಟೋಲ್ನಲ್ಲಿ ಕಾಯುವ ಸಮಯ ಉಳಿತಾಯವಾಗುತ್ತದೆ. ಪದೇಪದೆ ರೀಚಾರ್ಜ್ ಮಾಡಿಸುವ ತೊಂದರೆ ತಪ್ಪುತ್ತದೆ. ರಾಷ್ಟ್ರೀಯ ಹೆದ್ದಾರಿ ಮತ್ತು ಎಕ್ಸ್ಪ್ರೆಸ್ವೇಗಳಲ್ಲಿ ಮಾತ್ರ ಈ ಪಾಸ್ ವ್ಯಾಲಿಡ್ ಆಗಿದ್ದು, ರಾಜ್ಯ ಅಥವಾ ಖಾಸಗಿ ಹೆದ್ದಾರಿಗಳಿಗೆ ಅನ್ವಯಿಸುವುದಿಲ್ಲ.

