ಲಕ್ನೋ, ಏಪ್ರಿಲ್ 11: ವೃಂದಾವನದ ಯಮುನಾ ನದಿಯಲ್ಲಿ ಸಂಭವಿಸಿದ ಭೀಕರ ಬೋಟ್ ದುರಂತದಲ್ಲಿ 10 ಮಂದಿ ಸಾವನ್ನಪ್ಪಿದ್ದು, 22 ಜನರು ಗಾಯಗೊಂಡಿದ್ದಾರೆ. ಇನ್ನೂ ಐವರು ನಾಪತ್ತೆಯಾಗಿರುವುದು ಆತಂಕ ಹೆಚ್ಚಿಸಿದೆ.
ಕೇಸಿ ಘಾಟ್ ಬಳಿ ಪಂಜಾಬ್‌ನಿಂದ ಬಂದ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬೋಟ್ ಆಳವಾದ ನೀರಿಗೆ ತೆರಳಿ ತೇಲುತ್ತಿದ್ದ ಪಾಂಟೂನ್‌ಗೆ ಡಿಕ್ಕಿ ಹೊಡೆದು ಮಗುಚಿದ ಪರಿಣಾಮ ಈ ಅವಘಡ ಸಂಭವಿಸಿದೆ.
ಇತ್ತೀಚೆಗೆ ನೀರಿನ ಮಟ್ಟ ಏರಿಕೆಯಿಂದಾಗಿ ಈ ಪ್ರದೇಶದ ಪಾಂಟೂನ್ ಸೇತುವೆಯನ್ನು ತೆರವುಗೊಳಿಸಲಾಗಿತ್ತು. ಆದರೆ ಕೆಲವು ಪಾಂಟೂನ್ ಡ್ರಮ್‌ಗಳು ನದಿಯಲ್ಲಿ ಉಳಿದಿದ್ದು, ಅವುಗಳಲ್ಲಿ ಒಂದಕ್ಕೆ ಬೋಟ್ ಡಿಕ್ಕಿ ಹೊಡೆದಿರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರೊಂದಿಗೆ ಮಾತನಾಡಿ, ಅಗತ್ಯವಿರುವ ಎಲ್ಲ ಸಹಾಯ ಒದಗಿಸುವ ಭರವಸೆ ನೀಡಿದ್ದಾರೆ. ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆಗಳಿಗೆ ಪಂಜಾಬ್ ಸರ್ಕಾರವು ಉತ್ತರ ಪ್ರದೇಶದೊಂದಿಗೆ ನಿರಂತರ ಸಂಪರ್ಕದಲ್ಲಿದೆ.
ಮೃತರಲ್ಲಿ ಹೆಚ್ಚಿನವರು ಲುಧಿಯಾನದ ಜಗ್ರಾಂವ್ ಮತ್ತು ದುಗ್ರಿ ಪ್ರದೇಶದವರಾಗಿದ್ದಾರೆ ಎಂದು ತಿಳಿದುಬಂದಿದೆ. ಜಗ್ರಾಂವ್‌ನ ಶ್ರೀ ಬಂಕೆ ಬಿಹಾರಿ ಕ್ಲಬ್‌ನಿಂದ ಸುಮಾರು 120 ಯಾತ್ರಿಕರು ಏಪ್ರಿಲ್ 9ರಂದು ಎರಡು ಬಸ್‌ಗಳಲ್ಲಿ ನಾಲ್ಕು ದಿನಗಳ ಪ್ರವಾಸಕ್ಕಾಗಿ ವೃಂದಾವನಕ್ಕೆ ಬಂದಿದ್ದರು.
ದುರಂತದಲ್ಲಿ ಮೃತಪಟ್ಟವರನ್ನು ಕವಿತಾ ರಾಣಿ (49), ಚರಂಜಿತ್ (40), ಸಪ್ನಾ ಹನ್ಸ್ (55), ರಿಕೇಶ್ ಗುಲಾಟಿ, ಮಧುರ್ ಬೆಹ್ಲ್, ಆಶಾ ರಾಣಿ, ಪಿಂಕಿ ಬೆಹ್ಲ್, ಅಂಜು ಗುಲಾಟಿ, ಇಶಾನ್ ಕಟಾರಿಯಾ ಮತ್ತು ಮಿನು ಬನ್ಸಾಲ್ ಎಂದು ಗುರುತಿಸಲಾಗಿದೆ.
ಮಾಣಿಕ್ ಟಂಡನ್, ಪಂಕಜ್ ಮಲ್ಹೋತ್ರಾ, ರಿಷಬ್ ಶರ್ಮಾ, ಯಶ್ ಭಲ್ಲಾ ಮತ್ತು ಮೋನಿಕಾ ಇನ್ನೂ ನಾಪತ್ತೆಯಾಗಿದ್ದಾರೆ.
ಗಾಯಗೊಂಡ 22 ಮಂದಿಯಲ್ಲಿ ಪಿಂಕಿ, ಮಂಜು, ಸವಿತಾ, ತನೀಶ್ ಜೈನ್, ರೇಖಾ, ರಾಜಿಂದರ್ ಕೌರ್, ಸರೋಜ್ ಮತ್ತು ಡಾಲಿ ಸೇರಿದಂತೆ ಹಲವರು ಚಿಕಿತ್ಸೆ ಪಡೆಯುತ್ತಿದ್ದು, ಇತರರ ಸ್ಥಿತಿ ಸ್ಥಿರವಾಗಿದೆ.
ಪೊಲೀಸರು, ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF), ಅಗ್ನಿಶಾಮಕ ದಳ, ನಾಗರಿಕ ರಕ್ಷಣಾ ತಂಡಗಳು, ಸೇನೆ ಹಾಗೂ ಸ್ಥಳೀಯ ಡೈವರ್‌ಗಳು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಂದುವರೆಸಿವೆ.

