ಅಮರಾವತಿ, ಮಾ. 26: ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯಲ್ಲೊಂದು ಭೀಕರ ರಸ್ತೆ ಅಪಘಾತ ಸಂಭವಿಸಿ ಕನಿಷ್ಠ 14 ಮಂದಿ ಸಜೀವ ದಹನಗೊಂಡಿದ್ದು, ಇನ್ನೂ 15 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಬೆಳಗ್ಗೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಯವರಂ ಸಮೀಪ ಬೆಳಿಗ್ಗೆ ಸುಮಾರು 6.30ಕ್ಕೆ ಖಾಸಗಿ ಪ್ರಯಾಣಿಕರ ಬಸ್ ಒಂದು ಟಿಪ್ಪರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ನಡೆದಿದೆ. ಡಿಕ್ಕಿಯ ತಕ್ಷಣವೇ ಬಸ್‌ಗೆ ಬೆಂಕಿ ಹೊತ್ತಿಕೊಂಡು, ಎರಡೂ ವಾಹನಗಳು ಸಂಪೂರ್ಣವಾಗಿ ಹೊತ್ತಿ ಉರಿದಿವೆ.
ಅಪಘಾತದ ವೇಳೆ ಹರಿಕೃಷ್ಣ ಟ್ರಾವೆಲ್ಸ್‌ಗೆ ಸೇರಿದ ಬಸ್‌ನಲ್ಲಿ ಒಟ್ಟು 35 ಪ್ರಯಾಣಿಕರು ಇದ್ದರು. ಬೆಂಕಿ ಕಾಣಿಸಿಕೊಂಡ ತಕ್ಷಣ 10 ಮಂದಿ ಪ್ರಯಾಣಿಕರು ಬಸ್‌ನಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಗಾಯಗೊಂಡ 15 ಮಂದಿಯನ್ನು ಮಾರ್ಕಾಪುರಂ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಕೆಲವರ ಸ್ಥಿತಿ ಗಂಭೀರವಾಗಿರುವುದರಿಂದ ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿಗೀಡಾದವರು ಹಾಗೂ ಗಾಯಾಳುಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಕೂಡ ಸೇರಿದ್ದಾರೆ. ಈ ದುರ್ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

