ಬೆಂಗಳೂರು : ಬಿಎಂಟಿಸಿಗೆ ಹೊಸದಾಗಿ 148 ಟಾಟಾ ಎಲೆಕ್ಟ್ರಿಕ್ ಬಸ್ಗಳು ಸೇರ್ಪಡೆಗೊಂಡಿವೆ. ಶಾಂತಿನಗರದಲ್ಲಿ ಶುಕ್ರವಾರ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಹೊಸ ಬಸ್ಗಳಿಗೆ ಹಸಿರು ನಿಶಾನೆ ತೋರಿದ್ದಾರೆ. ಆ ಮೂಲಕ ಇಂದಿನಿಂದ ಬೆಂಗಳೂರಿನ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಬಹುದಾಗಿದೆ. ಒಂದು ಕಿ.ಮೀ. ಗೆ 41.1 ಪೈಸೆ ರೂ. ಗುತ್ತಿಗೆ ಆಧಾರದಲ್ಲಿ ಈ 148 ಬಸ್ಗಳು ಸಂಚಾರ ಮಾಡಲಿವೆ.
ಸದ್ಯ ಬಿಎಂಟಿಸಿಯಲ್ಲಿ ಎಸಿ ವೋಲ್ವೋ, ಸೇರಿದಂತೆ 6900 ಬಸ್ಗಳಿದ್ದು, ಈ 148 ಬಸ್ಗಳು ಸೇರ್ಪಡೆಯೊಂದಿಗೆ ಒಟ್ಟು 7,048 ಬಸ್ಗಳನ್ನು ಬಿಎಂಟಿಸಿ ಹೊಂದಿದೆ. ಈ ಎಲೆಕ್ಟ್ರಿಕ್ ಬಸ್ಗಳು 12 ವರ್ಷಗಳ ಕಾಲ ಬೆಂಗಳೂರಿನ ಬಿಎಂಟಿಸಿಯಲ್ಲಿ ಸಂಚಾರ ಮಾಡಲಿವೆ. ಈ ಬಸ್ಗಳಿಗೆ ಕಂಡಕ್ಟರ್ ಬಿಎಂಟಿಸಿ ನಿಗಮದಿಂದ ನೇಮಕ ಮಾಡಿದರೆ, ಡ್ರೈವರ್ಗಳು ಎಲೆಕ್ಟ್ರಿಕ್ ಬಸ್ ಕಂಪನಿಯಿಂದ ಕೆಲಸ ಮಾಡಲಿದ್ದಾರೆ. ಈ 148 ಬಸ್ಗಳು ಬೆಂಗಳೂರಿನ 30 ಮಾರ್ಗಗಳಲ್ಲಿ ಸಂಚಾರ ನಡೆಸಲಿದೆ.
ಟಾಟಾ ಎಲೆಕ್ಟ್ರಿಕ್ ಬಸ್ಗಳ ವಿಶೇಷತೆಗಳು
ಬಹುತೇಕ ಶೂನ್ಯ ಹೊರ ಸೂಸುವಿಕೆ ಹಾಗೂ ಪರಿಸರ ಸ್ನೇಹಿ ಬಸ್ಗಳು. 12ಮೀ ಉದ್ದ, 400ಮಿಮೀ ಎತ್ತರ ಹವಾನಿಯಂತ್ರಿತವಲ್ಲದ ವಿದ್ಯುತ್ ಚಾಲಿತ ಬಸ್ಗಳಾಗಿರುತ್ತವೆ. ಒಂದು ಭಾರಿ ಚಾರ್ಜ್ಗೆ 200 ಕಿ.ಮೀ ಚಲಿಸುವತ್ತವೆ.ಎಲ್ಲಾ 148 ಬಸ್ಗಳು ಘಟಕ-04 (ಜಯನಗರ) ರಿಂದ ಸಂಚರಿಸಲಿವೆ.
35 ಪ್ರಯಾಣಿಕ ಆಸನಗಳ ಸಾಮರ್ಥ್ಯ ಹೊಂದಿದ್ದು, 1 ಗಾಲಿ ಕುರ್ಚಿಗೆ ಅವಕಾಶವಿರುತ್ತದೆ.
ಪ್ರಯಾಣಿಕರ ಸುರಕ್ಷತೆಯನ್ನು ಖಾತರಿಪಡಿಸಿಕೊಳ್ಳಲು ಬಸ್ನ ಒಳಭಾಗದಲ್ಲಿ 3 ಕ್ಯಾಮೆರಾಗಳನ್ನು ಹಾಗೂ ಚಾಲಕರಿಗೆ ಹಿಮ್ಮುಖವಾಗಿ ಚಲಿಸಲು ಅನುಕೂಲವಾಗುವಂತೆ 1 ಕ್ಯಾಮೆರಾವನ್ನು ಬಸ್ನ ಹಿಂಬದಿ ಅಳವಡಿಸಲಾಗಿದೆ. 4 ಎಲ್.ಇ.ಡಿ ಬೋರ್ಡ್ ಮತ್ತು ಧ್ವನಿ ಪ್ರಕಟಣೆ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳೆಯರ ಸುರಕ್ಷತೆಗೆ 10 ತುರ್ತು ಪ್ಯಾನಿಕ್ ಅಲಾರ್ಮ್ ಬಟನ್ಗಳನ್ನು ಅಳವಡಿಸಲಾಗಿರುತ್ತದೆ.ಅಗ್ನಿ ಅವಘಡಗಳನ್ನು ತಪ್ಪಿಸುವ ಸಲುವಾಗಿ ‘ಅಗ್ನಿ ಪತ್ತೆ ಹಾಗೂ ಎಚ್ಚರಿಕೆ ವ್ಯವಸ್ಥೆ’ (FDAS-Fire Detection and Alarm System) ಒದಗಿಸಲಾಗಿದೆ.ವಾಹನಗಳ ಮೇಲೆ ನಿರಂತರವಾಗಿ ನಿಗಾಯಿಡಲು ವಾಹನದ ಸ್ಥಳ ಸೂಚಿಸುವ ವ್ಯವಸ್ಥೆ ಒದಗಿಸಲಾಗಿದೆ.
ಹಿರಿಯ ನಾಗರೀಕರು, ವಿಕಲಾಂಗ ವ್ಯಕ್ತಿಗಳು ಹಾಗೂ ಗಾಲಿ ಕುರ್ಚಿ ಪ್ರಯಾಣಿಕರು ಸುಲಭವಾಗಿ ಮತ್ತು ಸುರಕ್ಷಿತವಾಗಿ ಬಸ್ ಒಳ ಬರಲು ಮತ್ತು ಹೊರ ಹೋಗಲು ಅನುಕೂಲವಾಗುವಂತೆ, ಬಸ್ನ ಎಡಭಾಗವು ಬಾಗುವ ವ್ಯವಸ್ಥೆಯನ್ನು ಹೊಂದಿರುತ್ತದೆ.

