ನವದೆಹಲಿ: ಎಂಟು ಮಕ್ಕಳು ಸೇರಿದಂತೆ ಹದಿನೇಳು ಬಾಂಗ್ಲಾದೇಶೀಯರನ್ನು ಶನಿವಾರ ಅಸ್ಸಾಂನಲ್ಲಿ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಆರೋಪದ ಮೇಲೆ ಬಂಧಿಸಿ ನಂತರ ವಾಪಸ್ ಕಳುಹಿಸಲಾಗಿದೆ. ಈ ಬಗ್ಗೆಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಮಾಹಿತಿ ನೀಡಿದ್ದಾರೆ.
“ಒಳನುಸುಳುವಿಕೆಯ ವಿರುದ್ಧ ದೃಢವಾದ ನಿಲುವು ತಳೆದ ಅಸ್ಸಾಂ ಪೊಲೀಸ್ ಇಂದು ನಸುಕಿನಲ್ಲಿ 9 ಬಾಂಗ್ಲಾದೇಶಿಗಳು ಮತ್ತು 8 ಮಕ್ಕಳನ್ನು ಗಡಿಯಿಂದ ಹಿಂದಕ್ಕೆ ತಳ್ಳಿದ್ದಾರೆ” ಎಂದು ಹಿಮಂತ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. ಅಕ್ರಮ ವಲಸಿಗರ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ.
ಬಾಂಗ್ಲಾದೇಶದ ಪ್ರಕ್ಷುಬ್ಧತೆಯ ನಂತರ ಅಕ್ರಮವಾಗಿ ಭಾರತ ಪ್ರವೇಶಿಸಿದ್ದಕ್ಕಾಗಿ ಅಸ್ಸಾಂ ರಾಜ್ಯದಲ್ಲಿ ಇದುವರೆಗೆ ಸುಮಾರು 100 ಜನರನ್ನು ಬಂಧಿಸಿ ವಾಪಸ್ ಕಳುಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

