ಬೆಂಗಳೂರು: ರಾಜಧಾನಿ ಬೆಂಗಳೂರಿನ ಹೊರವಲಯದಲ್ಲಿ ಎರಡು ಹೊಸ ರೈಲ್ವೆ ಟರ್ಮಿನಲ್ ನಿರ್ಮಾಣ ಮಾಡಲಾಗುವುದೆಂದು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ ಸೋಮಣ್ಣ ತಿಳಿಸಿದರು. ರಾಜಧಾನಿ ಬೆಂಗಳೂರು ಶರವೇಗದಲ್ಲಿ ಬೆಳೆಯುತ್ತಿದ್ದು ನಗರದ ರೈಲ್ವೆ ನಿಲ್ದಾಣಗಳಲ್ಲಿ ಜನದಟ್ಟಣೆ ಹೆಚ್ಚುತ್ತಿದೆ ಹೀಗಾಗಿ ರಾಜಧಾನಿಯ ಹೊರ ವಲಯದಲ್ಲಿ ಎರಡು ಹೊಸ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಲಾಗುವುದೆಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸೋಮಣ್ಣ ಹೇಳಿದರು.
ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಸೋಮಣ್ಣ ಅವರು, ದೇವನಹಳ್ಳಿ ಮತ್ತು ನೆಲಮಂಗಲದಲ್ಲಿ ಹೊಸದಾಗಿ ರೈಲ್ವೆ ನಿಲ್ದಾಣ ನಿರ್ಮಾಣ ಮಾಡಲು ತೀರ್ಮಾನಿಸಿದ್ದು, ಈಗಾಗಲೇ ದೇವನಹಳ್ಳಿಯಲ್ಲಿ ರೈಲ್ವೆ ನಿಲ್ದಾಣಕ್ಕಾಗಿ 400 ಎಕರೆ ಜಾಗವನ್ನ ವಶಪಡಿಸಿಕೊಳ್ಳಲಾಗಿದೆ. ನೆಲಮಂಗಲದಲ್ಲಿ ರೈಲ್ವೆ ನಿಲ್ದಾಣ ನಿರ್ಮಾಣಕ್ಕೆ ಈಗಾಗಲೇ ಇಲಾಖೆಯ ಅಧಿಕಾರಿಗಳು ಯೋಜನೆ ರೂಪಿಸಿದ್ದಾರೆ. ಅಗತ್ಯ ಕಂಡು ಬಂದರೆ ರಾಮನಗರ ಮಾಗಡಿಯಲ್ಲಿಯೂ ರೈಲ್ವೆ ನಿಲ್ದಾಣ ನಿರ್ಮಿಸಾಲಗುವುದು ಎಂದರು.
ಬೆಂಗಳೂರಿನ ಪ್ರಮುಖ ರೈಲ್ವೆ ನಿಲ್ದಾಣಗಳಾದ ಕೆಎಸ್‌ಆರ್ ಬೆಂಗಳೂರು ಮತ್ತು ಯಶವಂತಪುರ ರೈಲ್ವೆ ನಿಲ್ದಾಣದಲ್ಲಿ ಹೆಚ್ಚುವರಿ ಪ್ಲಾಟ್ ಫಾರ್ಮ್ ನಿರ್ಮಿಸಿಲಿದ್ದು, ಈ ಎರಡು ರೈಲ್ವೆ ನಿಲ್ದಾಣದಲ್ಲಿ ಇನ್ನೆರಡು ಹೆಚ್ಚುವರಿ ಪ್ಲಾಟ್ ಫಾರ್ಮ್ ನಿರ್ಮಾಣಕ್ಕೆ ಪತ್ರಿ ನಿಲ್ದಾಣಕ್ಕೆ 180 ಕೋಟಿಯಂತೆ ಒಟ್ಟೂ 360 ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದರು.
ಯಶವಂತಪುರ ಸ್ಲಂ ಜಾಗ ವಶಕ್ಕೆ
ಯಶವಂತಪುರ ರೈಲ್ವೆ ನಿಲ್ದಾಣದ ಪಕ್ಕದಲ್ಲೇ ಇರುವ ಸ್ಲಂ ಜಾಗವನ್ನ ವಶಪಡಿಸಿಕೊಂಡು ಇನ್ನೂ ಹೆಚ್ಚಿನ ಪ್ಲಾಟ್ ಫಾರ್ಮ್ ನಿರ್ಮಾಣ ಮಾಡುವ ಯೋಚನೆಯೂ ಇದೆ ಎಂದು ಸಚಿವರು ತಿಳಿಸಿದರು. ನಗರದ ಹೂಡಿ, ವೈಟ್‌ಫೀಲ್ಡ್, ಬೆಳ್ಳಂದೂರು ಮತ್ತು ಕಾರ್ಮೆಲರಾಮ್ ಸೇರಿದಂತೆ ಇತರೆ ರೈಲು ನಿಲ್ದಾಣಗಳನ್ನು ಖುದ್ದಾಗಿ ಪರಿಶೀಲಿಸಿದ ಸಚಿವರು ರೈಲು ನಿಲ್ದಾಣಗಳಲ್ಲಿ ಮೂಲಸೌಕರ್ಯ ಕಲ್ಪಿಸಲು ಕ್ರಮ ವಸಹಲಾಗುವುದು ಎಂದರು.
ರೈಲ್ವೆ ಮಾರ್ಗ ಹೋದ ಹಲವೆಡೆ ರಾಜಕಾಲುವೆ ಅಗಲೀಕರಣವಾಗಬೇಕಾದ ಅನಿವಾರ್ಯತೆ ಇದೆ. ಈ ಸಂಬಂಧ ರೈಲ್ವೆ ಇಲಾಖೆ ತಮ್ಮ ವ್ಯಾಪ್ತಿಯಲ್ಲಿನ ರಾಜಕಾಲುವೆ ಕಾಮಗಾರಿ ನಡೆಸಲಿದೆ.ಬೆಳ್ಳಂದೂರು ರಸ್ತೆ ರೈಲ್ವೆ ನಿಲ್ದಾಣಕ್ಕೆ ಸ್ಥಳೀಯರ ಬೇಡಿಕೆಯಂತೆ ಪಣ್ಣತ್ತೂರು ರೈಲ್ ನಿಲ್ದಾಣವೆಂದು ಮರುನಾಮಕರಣ ಮಾಡಲು ಕ್ರಮ ವಹಿಸಲಾಗುವುದು ಎಂದರು.
2027ಜೂನ್ ವೇಳೆಗೆ ಉಪನನಗರ ರೈಲ್ವೆ :ಸಚಿವರ ಭರವಸೆ
ಸಬ್ ಅರ್ಬನ್ ರೈಲ್ವೆಯ ಬೈಯಪ್ಪನಹಳ್ಳಿ -ಚಿಕ್ಕಬಾಣವಾರ ಮತ್ತು ಹೀಲಲಿಗೆ ರಾಜನಕುಂಟೆ ಮಾರ್ಗಗಳ ಕಾಮಗಾರಿ ನಡೆಯುತ್ತಿದ್ದು 2026ರ ಅಂತ್ಯದೊಳಗೆ ಸಂಚಾರ ಆರಂಭಿಸುವ ನಿರೀಕ್ಷೆಯಿದ್ದು, ಒಂದು ವೇಳೆ ಸಾಧ್ಯವಾಗದೆ ಇದ್ದಲ್ಲಿ 2027 ಜೂನ್ ವೇಳೆಗೆ ಕಾಮಗಾರಿ ಮುಗಿಸಿ ಸಂಚಾರ ಆರಂಭಿಸಲಾಗುವುದೆಂದು ಸಚಿವ ಸೋಮಣ್ಣ ಭರವಸೆ ನೀಡಿದರು

