ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಸಾಂವಿಧಾನಿಕ ಹುದ್ದೆಗೆ ಏರಿ ಇಂದಿಗೆ 23 ವರ್ಷಗಳು ಸಂದಿವೆ. ಗುಜರಾತ್ ಮುಖ್ಯಮಂತ್ರಿಯಾಗಿ ರಾಜಕೀಯ ಪಯಣ ಆರಂಭಿಸಿದ ಅವರು ದಶಕಗಳಿಂದ ಪ್ರಧಾನಿಯಾಗಿ ದೇಶದ ನೇತೃತ್ವ ವಹಿಸುತ್ತಿದ್ದಾರೆ. ಹಲವು ದಶಕಗಳಿಂದ ಮೋದಿಯವರ ಪಕ್ಕದಲ್ಲಿಯೇ ಇದ್ದು ಅವರ ಪ್ರತಿ ಹೆಜ್ಜೆಗೆ ಸಾಥ್ ನೀಡುತ್ತಾ ಬಂದಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಅವರನ್ನು ಅಭಿನಂದಿಸಿದ್ದಾರೆ.ಸಾಂವಿಧಾನಿಕ ಕಚೇರಿಯಲ್ಲಿ ಪ್ರಧಾನಿಯವರ 23 ವರ್ಷಗಳನ್ನು ಸ್ಮರಿಸುತ್ತಾ ಶಾ ಅವರು ಇಂದು ಎಕ್ಸ್ ಪೋಸ್ಟ್ ಮಾಡಿದ್ದಾರೆ.
“ಇಂದು ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಮತ್ತು ಪ್ರಧಾನ ಮಂತ್ರಿಯಾಗಿ ಸಾರ್ವಜನಿಕ ಜೀವನದಲ್ಲಿ 23 ವರ್ಷಗಳನ್ನು ಪೂರೈಸಿದ್ದಾರೆ. ಒಬ್ಬ ವ್ಯಕ್ತಿಯು ತನ್ನ ಇಡೀ ಜೀವನವನ್ನು ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಾರ್ವಜನಿಕ ಸೇವೆಗೆ ಹೇಗೆ ಮುಡಿಪಾಗಿಟ್ಟಿದ್ದಾನೆ ಎಂಬುದಕ್ಕೆ ಈ 23 ವರ್ಷಗಳ ಸಾಧನೆ ಸಂಕೇತವಾಗಿದೆ. ಈ 23 ವರ್ಷಗಳ ಪ್ರಯಾಣವು ಸಾಮಾಜಿಕ ಜೀವನವನ್ನು ನಡೆಸುತ್ತಿರುವವರಿಗೆ ಜೀವಂತ ಸ್ಫೂರ್ತಿಯಾಗಿದೆ. ಮೋದಿ ಜೀ ಅವರ ಈ ಪ್ರಯಾಣಕ್ಕೆ ನಾನು ಸಾಕ್ಷಿಯಾಗಿದ್ದೇನೆ” ಎಂದಿದ್ದಾರೆ.
“ಬಡವರ ಕಲ್ಯಾಣ ಮತ್ತು ಅಭಿವೃದ್ಧಿ, ದೇಶದ ಭದ್ರತೆ ಮತ್ತು ಜಾಗತಿಕ ಗುರುತನ್ನು ಬಲಪಡಿಸುವುದು ಹೇಗೆ ಏಕಕಾಲದಲ್ಲಿ ಸಾಧ್ಯ ಎಂಬುದನ್ನು ಮೋದಿ ತೋರಿಸಿದರು. ಸಮಸ್ಯೆಗಳನ್ನು ತುಂಡು ತುಂಡಾಗಿ ನೋಡುವ ಬದಲು ಸಮಗ್ರ ಪರಿಹಾರದ ದೃಷ್ಟಿಕೋನವನ್ನು ಅವರು ದೇಶದ ಮುಂದೆ ಇಟ್ಟರು” ಎಂದಿದ್ದಾರೆ.
ಪ್ರಧಾನಿ ಮೋದಿಯವರನ್ನು ಅಭಿನಂದಿಸುತ್ತಾ, “23 ವರ್ಷಗಳಿಂದ ಎಂದೂ ನಿಲ್ಲದೆ, ದಣಿವರಿಯದೆ ರಾಷ್ಟ್ರ ನಿರ್ಮಾಣದಲ್ಲಿ ತೊಡಗಿದ ಮೋದಿಯವರನ್ನು ನಾನು ಅಭಿನಂದಿಸುತ್ತೇನೆ, ಅವರು ತಮ್ಮ ಜೀವನವನ್ನು ರಾಷ್ಟ್ರದ ಜನರಿಗಾಗಿ ಸಮರ್ಪಿಸಿದ್ದಾರೆ” ಎಂದಿದ್ದಾರೆ.