ಬೆಳಗಾವಿ : ಬೆಳಗಾವಿ ಗಡಿಭಾಗದಲ್ಲಿ ದೇಶದ ಇತಿಹಾಸದಲ್ಲೇ ಅತಿದೊಡ್ಡ ದರೋಡೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗೋವಾದಿಂದ ಮಹಾರಾಷ್ಟ್ರದ ನಾಸಿಕ್‌ಗೆ ಸಾಗಿಸುತ್ತಿದ್ದ ₹400 ಕೋಟಿ ನಗದು ತುಂಬಿದ ಎರಡು ಕಂಟೇನರ್ ಲಾರಿಗಳನ್ನು ಹೈಜಾಕ್ ಮಾಡಿ ದರೋಡೆ ಮಾಡಿರುವುದು ಪತ್ತೆಯಾಗಿದೆ.
2025ರ ಅಕ್ಟೋಬರ್ 16ರಂದು ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಪ್ರದೇಶದಲ್ಲಿ ಈ ಭಾರೀ ರಾಬರಿ ನಡೆದಿದ್ದು, ಸುಮಾರು ₹400 ಕೋಟಿ ಮೌಲ್ಯದ 2000 ರೂ. ನೋಟುಗಳನ್ನು ಹೊತ್ತಿದ್ದ ಎರಡು ಕಂಟೇನರ್‌ಗಳನ್ನು ಅಂತರರಾಜ್ಯ ದರೋಡೆಕೋರರು ಅಪಹರಿಸಿದ್ದಾರೆ. ಈ ಪ್ರಕರಣವನ್ನು ದೇಶದ ಇತಿಹಾಸದಲ್ಲೇ ಅತಿದೊಡ್ಡ ದರೋಡೆ ಎಂದು ಪೊಲೀಸರು ವರ್ಣಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇದುವರೆಗೆ ನಾಲ್ವರನ್ನು ಬಂಧಿಸಲಾಗಿದ್ದು, ದರೋಡೆಗೆ ಸಂಬಂಧಿಸಿದ ಹಣ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ವ್ಯಾಪಕ ಹುಟುಕಾಟ ನಡೆಸುತ್ತಿದ್ದಾರೆ.
ಇದೀಗ ನಾಸಿಕ್ ಮತ್ತು ಕರ್ನಾಟಕದ ನಡುವಿನ ಅಂತರರಾಜ್ಯ ಕಳ್ಳತನ ಪ್ರಕರಣದಲ್ಲಿ ಮಹತ್ವದ ಪ್ರಗತಿ ಕಂಡುಬಂದಿದೆ. ವಿಶೇಷ ತನಿಖಾ ತಂಡ (ಎಸ್‌ಐಟಿ) ಮತ್ತೊಬ್ಬ ಪ್ರಮುಖ ಆರೋಪಿಯನ್ನು ಬಂಧಿಸಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಜನವರಿ 23ರ ಮಧ್ಯರಾತ್ರಿಯ ನಂತರ ವಿರಾಟ್ ಗಾಂಧಿ ಎಂಬ ಆರೋಪಿಯನ್ನು ಡೊಂಬಿವ್ಲಿಯಿಂದ ಬಂಧಿಸಲಾಗಿದೆ ಎಂದು ಘೋಟಿ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ವಿಜಯ್ ಶಿಂಧೆ ತಿಳಿಸಿದ್ದಾರೆ. “ನಿನ್ನೆ ರಾತ್ರಿ ಡೊಂಬಿವ್ಲಿಯಿಂದ ಒಬ್ಬ ವ್ಯಕ್ತಿಯನ್ನು ಬಂಧಿಸಿದ್ದೇವೆ. ಈ ಪ್ರಕರಣದ ತನಿಖೆಗೆ ಬೆಳಗಾವಿ ಪೊಲೀಸರು ಇಲ್ಲಿಗೆ ಬಂದಿದ್ದರು. ಈಗ ಈ ಪ್ರಕರಣದಲ್ಲಿ ಒಟ್ಟು ಏಳು ಜನರನ್ನು ಬಂಧಿಸಲಾಗಿದೆ. ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಅವರು ಅಜರ್ ಹಾಗೂ ಕಿಶೋರ್ ಸಾವ್ಲಾ. ಕಿಶೋರ್ ಸಾವ್ಲಾ ಥಾಣೆಯ ದೊಡ್ಡ ಉದ್ಯಮಿ (ಬಿಲ್ಡರ್),” ಎಂದು ಅವರು ಹೇಳಿದ್ದಾರೆ.
ನಾಸಿಕ್ ಪೊಲೀಸರ ಪ್ರಕಾರ, ಬಂಧಿತ ವಿರಾಟ್ ಗಾಂಧಿ ರಾಜಸ್ಥಾನ ಮೂಲದ ಹವಾಲಾ ಆಪರೇಟರ್ ಆಗಿದ್ದು, ಧಾರ್ಮಿಕ ಸಂಸ್ಥೆಯೊಂದರೊಂದಿಗೆ ಸಂಪರ್ಕ ಹೊಂದಿದ್ದಾನೆ. ಪ್ರಕರಣ ದಾಖಲಾಗಿದ ದಿನದಿಂದಲೇ ಆತ ತಲೆಮರೆಸಿಕೊಂಡಿದ್ದನು. ಈ ಪ್ರಕರಣದಲ್ಲಿ ನಾಸಿಕ್ ಮತ್ತು ಕರ್ನಾಟಕ ಪೊಲೀಸರು ಜಂಟಿ ತನಿಖೆ ನಡೆಸುತ್ತಿದ್ದಾರೆ ಎಂದು ನಾಸಿಕ್ ಗ್ರಾಮೀಣ ಉಪ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಮಿರ್ಖೇಲ್ಕರ್ ತಿಳಿಸಿದ್ದಾರೆ.
400 ಕೋಟಿ ಅಲ್ಲ, 1 ಸಾವಿರ ಕೋಟಿ ಲೂಟಿ!
ದೇಶದ ಅತಿ ದೊಡ್ಡ ರಾಬರಿ ಪ್ರಕರಣ, ಕರ್ನಾಟಕದ ಗಡಿ ಜಿಲ್ಲೆ ಬೆಳಗಾವಿಯ ಖಾನಾಪೂರ ತಾಲೂಕಿನ ಚೋರ್ಲಾ ಘಾಟ್‌ನಲ್ಲಿ ನಡೆದ 400 ಕೋಟಿ ರೂ. ಹಣವಿದ್ದ 2 ಕಂಟೇನರ್ ನಾಪತ್ತೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಬೆಳಗಾವಿಯಲ್ಲಿ ಚೋರ್ಲಾ ಘಾಟ್ ನಲ್ಲಿ ನಡೆದಿದ್ದು 400 ಕೋಟಿಯಲ್ಲ ಬರೋಬ್ಬರಿ 1000 ಕೋಟಿ ದರೋಡೆ ಎಂದು ಹೇಳಲಾಗುತ್ತಿದೆ.
ಚೋರ್ಲಾ ಘಾಟ್ ನಲ್ಲಿ ದರೋಡೆಯಾಗಿದ್ದು 1000 ಕೋಟಿ ರೂಪಾಯಿ. ಅದರಲ್ಲಿ ಬ್ಯಾನ್ ಆಗಿದ್ದ 2000 ರೂ ಮುಖಬೆಲೆಯ ನೋಟುಗಳು ಇದ್ದವು. ರದ್ದಾಗಿದ್ದ ನೋಟ್ಗಳನ್ನು ಕಂಟೇನರ್ ವಾಹನದಲ್ಲಿ ಸಾಗಿಸಲಾಗುತ್ತಿತ್ತು. ಈ ವೇಳೆ ದರೋಡೆ ನಡೆದಿದೆ ಎಂದು ದೂರುದಾರ ಸಂದೀಪ್ ಪಾಟೀಲ್ ಹೇಳಿಕೆ ನೀಡಿದ್ದಾರೆ.
ಇದು ದೇಶದ ಅಪರಾಧದ ಇತಿಹಾಸದಲ್ಲೇ ಬೆಚ್ಚಿಬೀಳಿಸುವ ಅತಿದೊಡ್ಡ ದರೋಡೆ ಪ್ರಕರಣ ಎನ್ನಲಾಗುತ್ತಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಹಣ ಸಾಗಿಸುತ್ತಿದ್ದ 2 ಕಂಟೇನರ್‌ಗಳನ್ನು ಹೈಜಾಕ್ ಮಾಡಲಾಗಿದೆ. 2025 ಅಕ್ಟೋಬರ್ 16ರಂದು ಈ ಘಟನೆ ನಡೆದಿದೆ.

