ಬೆಂಗಳೂರು, ಫೆಬ್ರವರಿ 25: ಇಂದಿರಾನಗರದಲ್ಲಿರುವ ಚಿನ್ಮಯ್ ಮಿಷನ್ ಆಸ್ಪತ್ರೆ ವಿರುದ್ಧ ಗಂಭೀರ ನಿರ್ಲಕ್ಷ್ಯದ ಆರೋಪ ಕೇಳಿಬಂದಿದ್ದು, 6 ತಿಂಗಳ ಮಗು ಬಾಲಕುಮಾರನ ಕಿರುಬೆರಳು ಕಟ್ ಆಗಿರುವ ಘಟನೆ ಸಂಚಲನ ಮೂಡಿಸಿದೆ.
ಶೀತ ಹಾಗೂ ಅನಾರೋಗ್ಯ ಹಿನ್ನೆಲೆ ಇದೇ ತಿಂಗಳ 19ರಂದು ಮಗುವನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಬಳಿಕ ಡಿಸ್ಚಾರ್ಜ್ ಮಾಡುವ ಸಂದರ್ಭದಲ್ಲಿ ಮಗುವಿನ ಕೈ ಬೆರಳಿಗೆ ಬ್ಯಾಂಡೇಜ್ ಹಾಕಲಾಗಿತ್ತು ಎಂದು ಪೋಷಕರು ತಿಳಿಸಿದ್ದಾರೆ.
ಮನೆಗೆ ತೆರಳಿ ಡ್ರೆಸಿಂಗ್ ತೆಗೆಯುವಾಗ ಕಿರುಬೆರಳು ಕಟ್ ಆಗಿರುವುದು ಪೋಷಕರ ಗಮನಕ್ಕೆ ಬಂದಿದೆ. ಈ ಕುರಿತು ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ ಎಂದು ಕುಟುಂಬದವರು ಹೇಳಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿಯನ್ನು ಪ್ರಶ್ನಿಸಿದಾಗ “ಏನೂ ಆಗಿಲ್ಲ, ಮನೆಗೆ ಹೋಗಿ” ಎಂದು ಹೇಳಿ ಕಳುಹಿಸಲಾಗಿದೆ ಎಂದು ಪೋಷಕರು ಆರೋಪಿಸಿದ್ದಾರೆ. ನರ್ಸ್‌ನ ನಿರ್ಲಕ್ಷ್ಯದಿಂದ ಬೆರಳು ಕಟ್ ಆಗಿದೆ ಎಂಬ ದೂರಿನ ಮೇರೆಗೆ ಆಸ್ಪತ್ರೆ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
ವೈದ್ಯರು ಹಾಗೂ ನರ್ಸ್‌ಗಳ ನಿರ್ಲಕ್ಷ್ಯದಿಂದ ಮಗುವಿಗೆ ಅನ್ಯಾಯವಾಗಿದೆ ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿ, ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದು, ವೈದ್ಯಕೀಯ ದಾಖಲೆಗಳು, ಡ್ರೆಸಿಂಗ್ ಪ್ರಕ್ರಿಯೆ ಹಾಗೂ ಕರ್ತವ್ಯದಲ್ಲಿದ್ದ ಸಿಬ್ಬಂದಿ ಕುರಿತು ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆಸ್ಪತ್ರೆಯ ಸ್ಪಷ್ಟನೆ ಹಾಗೂ ತನಿಖಾ ವರದಿ ಬಳಿಕವೇ ಘಟನೆಯ ನಿಜಾಂಶ ಬಹಿರಂಗವಾಗುವ ಸಾಧ್ಯತೆ ಇದೆ.

