ದೇವನಹಳ್ಳಿ : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ಬಳಿಯ ವೆಂಕಟಗಿರಿಕೋಟೆ ಬಳಿ ಕಡಿಮೆ ಬೆಲೆಗೆ ಚಿನ್ನ ಕೊಡಿಸುವ ಆಸೆ ತೋರಿಸಿ 15 ಲಕ್ಷ ರೂ. ದೋಚಿದ ಪ್ರಕರಣವನ್ನು ವಿಜಯಪುರ ಪೊಲೀಸರು ಕೇವಲ ಎರಡು ದಿನಗಳಲ್ಲಿ ಭೇದಿಸಿದ್ದಾರೆ.
ಗುರುವಾರ ನಡೆದಿದ್ದ ಈ ಸಿನಿಮೀಯ ಶೈಲಿಯ ರಾಬರಿ ಪ್ರಕರಣದಲ್ಲಿ ಭಾಗಿಯಾಗಿದ್ದ 7 ಜನ ದುಷ್ಕರ್ಮಿಗಳಲ್ಲಿ 5 ಜನರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಆರೋಪಿಗಳನ್ನು ಗಣೇಶ್ (25), ಸಾಗರ (28), ಮಂಜಪ್ಪ (40), ಷಣ್ಮುಘ (24) ಹಾಗೂ ಷಣ್ಮುಖ (31) ಎಂದು ಗುರುತಿಸಲಾಗಿದೆ. ಉಳಿದ ಇಬ್ಬರು ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಆರೋಪಿಗಳಿಂದ 15 ಲಕ್ಷ ರೂ. ನಗದು, 4 ಚಿನ್ನದ ನಾಣ್ಯಗಳು, 3 ಮೊಬೈಲ್ ಫೋನ್‌ಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಕ್ರೇಟಾ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸ್ಥಳ ಮಹಜರು ನಡೆಸಿದ ನಂತರ ಆರೋಪಿಗಳಿಗೆ ಮೆಡಿಕಲ್ ಟೆಸ್ಟ್ ಮಾಡಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಪ್ರಕರಣವನ್ನು ವೇಗವಾಗಿ ಭೇದಿಸಿದ ವಿಜಯಪುರ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.

