ಜೈಪುರ, ಫೆ.16: ರಾಜಸ್ಥಾನದ ಭಿವಾಡಿ ಪ್ರದೇಶದಲ್ಲಿರುವ ರಾಸಾಯನಿಕ ಕಾರ್ಖಾನೆಯಲ್ಲಿ ಸೋಮವಾರ ಬೆಳಿಗ್ಗೆ ಸಂಭವಿಸಿದ ಭಾರೀ ಅಗ್ನಿ ಅವಘಡದಲ್ಲಿ ಏಳು ಕಾರ್ಮಿಕರು ಸಾವನ್ನಪ್ಪಿದ ದುರ್ಘಟನೆ ನಡೆದಿದೆ. ಇನ್ನೂ ಸುಮಾರು 10 ಕಾರ್ಮಿಕರು ಕಾರ್ಖಾನೆಯೊಳಗೆ ಸಿಲುಕಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಬೆಳಿಗ್ಗೆ ಸುಮಾರು 9.30ರ ವೇಳೆಗೆ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಆ ವೇಳೆ 20 ರಿಂದ 25 ಕಾರ್ಮಿಕರು ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ. ಖಾಸಗಿ ಕೈಗಾರಿಕಾ ಘಟಕದಿಂದ ಹರಡಿದ ಜ್ವಾಲೆಗಳು ಕಾರ್ಖಾನೆಯ ಬಹುತೇಕ ಭಾಗವನ್ನು ಆವರಿಸಿಕೊಂಡಿದ್ದು, ಪರಿಸ್ಥಿತಿ ಆತಂಕಕಾರಿ ರೂಪ ಪಡೆದುಕೊಂಡಿತ್ತು.
ಕೆಲವರು ಸಮಯಕ್ಕೆ ತಕ್ಕಂತೆ ಹೊರಬಂದು ಜೀವ ಉಳಿಸಿಕೊಂಡರೆ, ಇನ್ನೂ ಕೆಲವರು ಬೆಂಕಿಯ ಜ್ವಾಲೆಗೆ ತುತ್ತಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆ ಕುರಿತು ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಸುಮಿತಾ ಮಿಶ್ರಾ ಮಾತನಾಡಿ, “ಪೊಲೀಸರು ನಿಯಮಿತ ಗಸ್ತಿನ ವೇಳೆ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿರುವುದು ಗಮನಕ್ಕೆ ಬಂದಿದ್ದು, ತಕ್ಷಣವೇ ಅಗ್ನಿಶಾಮಕ ದಳ, ವೈದ್ಯಕೀಯ ತಂಡಗಳು ಹಾಗೂ ಆಡಳಿತ ಸಿಬ್ಬಂದಿಗೆ ಮಾಹಿತಿ ನೀಡಲಾಯಿತು. ಒಂದೂವರೆ ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ” ಎಂದು ತಿಳಿಸಿದ್ದಾರೆ.
ತಿಜಾರಾ ಉಪ ಪೊಲೀಸ್ ವರಿಷ್ಠಾಧಿಕಾರಿ ಶಿವರಾಜ್ ಸಿಂಗ್ ಸ್ಥಳದಲ್ಲಿ ಪ್ರಾಥಮಿಕ ತನಿಖೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಇತರೆ ಹಿರಿಯ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಅಗ್ನಿ ಅವಘಡದ ನಿಖರ ಕಾರಣ ತಿಳಿಯಲು ಹಾಗೂ ಸುರಕ್ಷತಾ ನಿಯಮಗಳಲ್ಲಿ ಯಾವುದೇ ಲೋಪವಿದೆಯೇ ಎಂಬುದನ್ನು ಪತ್ತೆಹಚ್ಚಲು ಜಿಲ್ಲಾಡಳಿತವು ಮ್ಯಾಜಿಸ್ಟೀರಿಯಲ್ ತನಿಖೆಯನ್ನು ಘೋಷಿಸಿದೆ. ಘಟನೆಯಿಂದಾಗಿ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

