ಮುಂಬೈ: ರೈಲು ನಿಲ್ದಾಣದಲ್ಲಿ ಕಾಲ್ತುಳಿತ ಸಂಭವಿಸಿ 9 ಮಂದಿ ಗಂಭೀರ ಗಾಯಗೊಂಡಿರುವ ಘಟನೆ ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ನಡೆದಿದೆ. ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಈ ಕಾಲ್ತುಳಿತ ಅವಘಡ ಸಂಭವಿಸಿದ್ದು, ಭಾನುವಾರ ಬೆಳಗಿನ ಜಾವ 3 ರಿಂದ 4 ಗಂಟೆಯ ನಡುವೆ ಈ ಘಟನೆ ನಡೆದಿದೆ ಎನ್ನಲಾಗಿದೆ. ಅದೃಷ್ಟವಶಾತ್ ಈ ದುರಂತದಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಸದ್ಯ ಗಂಭೀರವಾಗಿ ಗಾಯಗೊಂಡಿರುವ ಒಂಭತ್ತು ಮಂದಿ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಿಎಂಸಿಯ ವಿಪತ್ತು ನಿರ್ವಹಣಾ ಇಲಾಖೆ ನೀಡಿರುವ ಮಾಹಿತಿ ಪ್ರಕಾರ, ಜನಸಂದಣಿಯಲ್ಲಿ ನೂಕುನುಗ್ಗಲು ಉಂಟಾಗಿ 9 ಮಂದಿ ಗಾಯಗೊಂಡಿದ್ದಾರೆ. ಬಾಂದ್ರಾ ಟರ್ಮಿನಸ್ನಲ್ಲಿ ಬಾಂದ್ರಾ ಗೋರಖ್ಪುರ ಎಕ್ಸ್ಪ್ರೆಸ್ಗೆ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಬಿಎಂಸಿ ತಿಳಿಸಿದೆ.
ಸಾಮಾನ್ಯವಾಗಿ ದೀಪಾವಳಿ ಹಬ್ಬಕ್ಕೆ ರಜೆ ಇರುವ ಕಾರಣ, ರೈಲುಗಳಲ್ಲಿ ಸಾಕಷ್ಟು ಜನಸಂದಣಿ ಇರುತ್ತದೆ. ಹೀಗಾಗಿ ಊರಿಂದ ಇನ್ನೊಂದು ಊರಿಗೆ ಹೋಗುವವರು ಗೋರಖ್ಪುರ ಎಕ್ಸ್ಪ್ರೆಸ್ ರೈಲು ಹತ್ತಲು ಬಾಂದ್ರಾ ನಿಲ್ದಾಣದಲ್ಲಿ ಬಂದಾಗ ಪ್ರಯಾಣಿಕರಲ್ಲಿ ಗಲಾಟೆ ನಡೆದಿದ್ದು, ಬಳಿಕ ಕಾಲ್ತುಳಿತ ಉಂಟಾಗಿದೆ ಎಂದು ಮೂಲಗಳು ತಿಳಿಸಿವೆ.