ದೆಹಲಿ : ಡಿವೈಎಸ್ಪಿ ಎಂಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರ ಪಾತ್ರವಿಲ್ಲ ಎಂದು ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಎತ್ತಿಹಿಡಿದಿದೆ. ಇದರಿಂದಾಗಿ ಸಚಿವ ಜಾರ್ಜ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಕೆ.ಜೆ.ಜಾರ್ಜ್ ಪಾತ್ರವಿಲ್ಲ ಎಂದು ತೀರ್ಪು ನೀಡಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಮೃತ ಗಣಪತಿಯವರ ಸಹೋದರಿ ಸಬೀತಾ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.
ಅರ್ಜಿ ವಿಚಾರಣೆ ನಡೆಸಿದ ನಡೆಸಿದ ನ್ಯಾಯಮೂರ್ತಿ ಬೇಲಾ ಎಂ ತ್ರಿವೇದಿ ನೇತೃತ್ವದ ದ್ವಿಸದಸ್ಯ ಪೀಠ, ಹೈಕೋರ್ಟ್ನ ಆದೇಶವನ್ನು ಎತ್ತಿಹಿಡಿದಿದೆ. ಇದರೊಂದಿಗೆ ಸಬೀತಾ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ.ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ತನಿಖೆ ನಡೆಸಿದ್ದ ಸಿಬಿಐ ಹಾಗೂ ಸಿಐಡಿ ತನಿಖಾ ತಂಡಗಳು ಬಿ ರಿಪೋರ್ಟ್ ಸಲ್ಲಿಸಿದ್ದವು. ಡಿವೈಎಸ್ಪಿ ಎಂ.ಕೆ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಜಾರ್ಜ್ ಪಾತ್ರವಿಲ್ಲ ಎಂದಿದ್ದವು.
ಪ್ರಕರಣದ ಹಿನ್ನೆಲೆ: ಮೂಲತಃ ಕೊಡಗಿನವರಾದ ಗಣಪತಿ ಮಂಗಳೂರು ಐಜಿಪಿ ಕಚೇರಿಯಲ್ಲಿ ಡಿವೈಎಸ್ಪಿ ಆಗಿದ್ದರು. 2016 ಜುಲೈ 7 ರಂದು ಮಡಿಕೇರಿಯ ವಿನಾಯಕ ಲಾಡ್ಜ್ನ ಕೊಠಡಿ ಸಂಖ್ಯೆ 315ರಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆತ್ಮಹತ್ಯೆಗೆ ಶರಣಾಗುವ ಮುನ್ನ ಕೊಡಗಿನ ಖಾಸಗಿ ಸುದ್ದಿ ವಾಹಿನಿಗೆ ಸಂದರ್ಶನ ನೀಡಿದ್ದ ಗಣಪತಿ ಅವರು, ಅಂದಿನ ಗೃಹ ಸಚಿವ ಕೆ. ಜೆ. ಜಾರ್ಜ್ ಹಾಗೂ ಐಪಿಎಸ್ ಅಧಿಕಾರಿಗಳಾದ ಪ್ರಣವ್ ಮೊಹಂತಿ ಹಾಗೂ ಎ.ಎಂ. ಪ್ರಸಾದ್ ತಮಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ, ನನ್ನ ಸಾವಿಗೆ ಈ ಮೂವರೇ ಕಾರಣ ಎಂದು ಹೇಳಿದ್ದರು.