ಬೆಂಗಳೂರು: ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವರಾದ ಜಿ.ಜನಾರ್ಧ ನರೆಡ್ಡಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಅವರ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬೇಕು ಎಂದು ರಾಜ್ಯಪಾಲರನ್ನು ಆಗ್ರಹಿಸಿ ಕಾಂಗ್ರೆಸ್ ಇಂದು ರಾಜಭವನ ಚಲೋ ಪ್ರತಿಭಟನೆ ನಡೆಸಿತು.
ವಿಧಾನಸೌಧ ಮತ್ತು ವಿಕಾಸಸೌಧದ ನಡುವೆ ಇರುವ ಮಹಾತಗಾಂಧೀಜಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ನಾಯಕರು ಬಳಿಕ ಅಲ್ಲಿಂದ ರಾಜಭವನದವರೆಗೂ ಪಾದಯಾತ್ರೆ ನಡೆಸಿದರು. ಆನಂತರ ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿ ಈ ಸಂಬಂಧ ಮನವಿಪತ್ರವನ್ನು ಸಲ್ಲಿಸಲಾಯಿತು.
ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಅನುಮತಿ ನೀಡಿದ ರಾಜ್ಯಪಾಲರ ನಡೆಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಅದರಂತೆ ಇದೀಗ ಕಾಂಗ್ರೆಸ್ ನಾಯಕರು ರಾಜ್ಯಪಾಲ ಟಿ.ಸಿ.ಗೆಹ್ಲೋಟ್ ಗೆ ಮನವಿ ಪತ್ರ ಸಲ್ಲಿಸಿದ್ದು, ಅದರಲ್ಲಿ ರಾಜ್ಯಪಾಲರ ನಡೆಗೆ ಕಟು ಶಬ್ದಗಳಿಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಮನವಿ ಪತ್ರದಲ್ಲಿ 4 ಪ್ರಕರಣಗಳನ್ನು ‘ಕೈ’ ನಾಯಕರು ಉಲ್ಲೇಖಿಸಿದ್ದಾರೆ.
ಮನವಿ ಪತ್ರದಲ್ಲೇನಿದೆ?
ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ, ಮಾಜಿ ಸಚಿವರಾದ ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಜನಾರ್ದನ ರೆಡ್ಡಿ ಅವರ ವಿರುದ್ಧದ ಪ್ರಕರಣವನ್ನು ಈ ಮನವಿ ಪತ್ರದಲ್ಲಿ ಪ್ರಸ್ತಾಪ ಮಾಡಲಾಗಿದೆ. ‘ಲೋಕಾಯುಕ್ತ ಸಂಸ್ಥೆಯಿಂದ ಪ್ರಾಸಿಕ್ಯೂಷನ್ಗೆ ಮನವಿ ಮಾಡಲಾಗಿದೆ. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 19ರ ಅಡಿ ನಾಲ್ಕು ಪ್ರಕರಣಗಳನ್ನು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಬೇಕು. ರಾಜ್ಯಪಾಲರ ಕಚೇರಿಯ ರಾಜಕೀಯ ದುರ್ಬಳಕೆ ನಿಂತು, ರಾಜಕೀಯ ಪ್ರೇರಿತ ದೂರುಗಳಿಗೆ ರಾಜಭವನ ಬಳಕೆ ಆಗಬಾರದು. ನಿಮ್ಮ ನಡೆ ಜನರ ವಿಶ್ವಾಸ ಕಳೆದುಕೊಳ್ಳುವಂತಿದ್ದು, ರಾಜಭವನದ ಬಗ್ಗೆ ಜನರು ಅನುಮಾನ ಪಡುವಂತಾಗಿದೆ ಎಂದು ಉಲ್ಲೇಖಿಸಲಾಗಿದೆ.
ಇನ್ನುBJP, JDSನವರ ಪ್ರಕರಣಗಳು ಪ್ರಾಸಿಕ್ಯೂಷನ್ಗೆ ಅನುಮತಿ ವಿಚಾರ, ‘ಅವರ ಪ್ರಾಸಿಕ್ಯೂಷನ್ಗೆ ಅನುಮತಿ ವಿಚಾರ ಕೋಲ್ಡ್ ಸ್ಟೋರೇಜ್ ಸೇರಿದೆ. ರಾಜ್ಯಪಾಲರ ಕಚೇರಿಯು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ. ಇದು ಅತ್ಯಂತ ಅಪಾಯಕಾರಿ ಮತ್ತು ನಮಗೆ ತೀವ್ರ ಆತಂಕ ಮೂಡಿಸುತ್ತಿದೆ. ಹೆಚ್.ಡಿ.ಕುಮಾರಸ್ವಾಮಿ, ಮುರುಗೇಶ್ ನಿರಾಣಿ, ಶಶಿಕಲಾ ಜೊಲ್ಲೆ,ಜನಾರ್ದನ ರೆಡ್ಡಿ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ಕೊಡಿ. ಈ ಮೂಲಕ ರಾಜಕೀಯ ಷಡ್ಯಂತ್ರಗಳಿಗೆ ರಾಜಭವನ ಬಲಿಯಾಗಿಲ್ಲವೆಂದು ಜನರಿಗೆ ಮನದಟ್ಟು ಮಾಡುವಂತೆ ರಾಜ್ಯಪಾಲರಿಗೆ ‘ಕೈ’ ನಾಯಕರು ಮನವಿ ಸಲ್ಲಿಕೆ ಮಾಡಿದ್ದಾರೆ.
ಮಹಾತಗಾಂಧೀಜಿ ಪ್ರತಿಮೆ ಬಳಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ.ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯ್ಲಿ, ಸಚಿವರಾದ ಡಾ.ಜಿ.ಪರಮೇಶ್ವರ, ಹೆಚ್.ಕೆ.ಪಾಟೀಲ್, ಕೃಷ್ಣಭೈರೇಗೌಡ, ರಾಮಲಿಂಗಾರೆಡ್ಡಿ, ಜಮೀರ್ ಅಹಮದ್ ಖಾನ್,ಈಶ್ವರ್ ಖಂಡ್ರೆ, ಬೈರತಿ ಸುರೇಶ್, ಡಿ.ಸುಧಾಕರ್, ಡಾ. ಎಂ.ಸಿ.ಸುಧಾಕರ್, ಎಸ್.ಎಸ್.ಮಲ್ಲಿಕಾರ್ಜುನ್, ಡಾ.ಶರಣ ಪ್ರಕಾಶ್ ಪಾಟೀಲ್ ಸೇರಿಂದತೆ ಕಾಂಗ್ರೆಸ್ ಪಕ್ಷದ ಶಾಸಕರು, ಸಂಸದರು , ಮಾಜಿ ಸಂಸದರು, ಮಾಜಿ ಶಾಸಕರು ಕೆಲಕಾಲ ಪ್ರತಿಭಟನೆ ನಡೆಸಿದರು.

