ಬೆಂಗಳೂರು: ಹಾಲಿನ ಖರೀದಿ ದರದಲ್ಲಿ 1.50 ರೂ.ಕಡಿತ ಮಾಡಿರುವ ಬಗ್ಗೆ ಕೇಂದ್ರ ಭಾರೀ ಕೈಗಾರಿಕೆ ಹಾಗೂ ಉಕ್ಕು ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.ಈ ಸಂಬಂಧ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೂಡಲೇ ಈ ಬಗ್ಗೆ ಮುಖ್ಯಮಂತ್ರಿಗಳು ಕ್ರಮ ವಹಿಸಿ ಹಾಲು ಖರೀದಿ ದರಕ್ಕೆ ತಡೆ ಒಡ್ಡಬೇಕು ಎಂದು ಆಗ್ರಹಿಸಿದ್ದಾರೆ.
ಅಧಿಕಾರ ದರ್ಪದ ಅಮಲಿನಿಂದ ಕೊಬ್ಬಿರುವ ರಾಜ್ಯ ಕಾಂಗ್ರೆಸ್ ಸರ್ಕಾರ, ಅನ್ನದಾತನ ಮೇಲೆ ಬರೆಯ ಬರೆ ಎಳೆಯುತ್ತಿದೆ. ರೈತನ ಜೀವನಾಧಾರವಾಗಿರುವ ಹಾಲಿನ ಮೇಲೆ ಕಾಂಗ್ರೆಸ್ ಆಡಳಿತದ ಕಾಕದೃಷ್ಟಿ ಬಿದ್ದಿದೆ. ಪರಿಣಾಮ ಹಾಲಿನ ಖರೀದಿ ದರಕ್ಕೆ ಕತ್ತರಿ ಪ್ರಯೋಗವಾಗಿದೆ ಎಂದು ಸಚಿವರು ಕಟುವಾಗಿ ಟೀಕಿಸಿದ್ದಾರೆ.
ಕೆಲ ಹಾಲು ಒಕ್ಕೂಟಗಳು ಏಕಪಕ್ಷೀಯವಾಗಿ ಹಾಲಿನ ಖರೀದಿ ದರದಲ್ಲಿ 1.50 ರೂ.ಕಡಿತ ಮಾಡಿವೆ. ಹೊಸ ಖರೀದಿ ದರ 30.50 ರಿಂದ 29 ರೂ.ಗೆ ಕುಸಿದಿದೆ. ಕಾಮಧೇನುವನ್ನೇ ನಂಬಿದ್ದ ರೈತನ ಕರುಳಿಗೆ ಕೊಳ್ಳಿ ಬಿದ್ದಿದೆ. ನಮ್ಮದು ರೈತಪರ ಸರ್ಕಾರ ಎನ್ನುವ ಮುಖ್ಯಮಂತ್ರಿಗಳು ಇತ್ತ ಗಮನ ಹರಿಸಬೇಕು. ಅವರಿಗೆ ಅಷ್ಟು ಸಮಯ ಇದೆ ಎಂದು ನಾನಾದರೂ ಪರಿಭಾವಿಸುತ್ತೇನೆ ಎಂದು ಅವರು ಹೇಳಿದ್ದಾರೆ.

