ಲಕ್ನೋ: ಪ್ರಯಾಗ್ರಾಜ್ ಮಾರ್ಗವಾಗಿ ತೆರಳುತ್ತಿದ್ದ ಕಾಳಿಂದಿ ಎಕ್ಸ್‌ಪ್ರೆಸ್ ರೈಲು ತೆರಳುವ ಹಳಿಗಳ ಮೇಲೆ ದುಷ್ಕರ್ಮಿಗಳು ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಇಟ್ಟು ರೈಲು ಅಪಘಾತ ನಡೆಸಲು ಸಂಚು ರೂಪಿಸಿರುವ ಘಟನೆ ಬೆಳಕಿಗೆ ಬಂದಿದೆ.
ಭಾನುವಾರ ರಾತ್ರಿ 8:25ರ ವೇಳೆ ಕಾನ್ಪುರದಿಂದ ಭಿವಾನಿಗೆ ಪ್ರಯಾಣಿಸುತ್ತಿದ್ದ ಕಾಳಿಂದಿ ಎಕ್ಸ್‌ಪ್ರೆಸ್ ಹಳಿ ಮೇಲಿದ್ದ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ. ಲೋಕೋ ಪೈಲಟ್ ಇದನ್ನು ಗಮನಿಸಿ ತಕ್ಷಣ ತುರ್ತು ಬ್ರೇಕ್ ಹಾಕಿದ್ದಾರೆ. ಡಿಕ್ಕಿಯ ರಭಸಕ್ಕೆ ಸಿಲಿಂಡರ್ ದೂರಕ್ಕೆ ಚಿಮ್ಮಿ ಸ್ಫೋಟಗೊಂಡಿದೆ. ಅದೃಷ್ಟವಶಾತ್ ಸಂಭಾವ್ಯ ಅನಾಹುತ ತಪ್ಪಿದೆ.
ಕಾನ್ಪುರದಿಂದ ಕಾಸ್‌ಗಂಜ್ ಮಾರ್ಗದಲ್ಲಿ ರೈಲು ಚಲಿಸುತ್ತಿತ್ತು. ರ‍್ರಾಜ್‌ಪುರ ಹಾಗೂ ಬಿಲ್ಹೌರ್ ನಿಲ್ದಾಣಗಳ ಮಧ್ಯೆ ಮುಂಡೇರಿ ಕ್ರಾಸಿಂಗ್ ಬಳಿ ಈ ಘಟನೆ ನಡೆದಿದೆ. ಮುಂಡೇರಿ ಕ್ರಾಸಿಂಗ್ ಬಳಿ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಪತ್ತೆಯಾಗಿದೆ.
👉 Please Follow our WhatsApp Channel for BREAKING News
ಗಂಟೆಗೆ 70 ರಿಂದ 80 ಕಿ.ಮೀ ವೇಗದಲ್ಲಿ ಚಲಿಸುತ್ತಿದ್ದ ರೈಲು ಹಳಿಯ ಮೇಲಿದ್ದ ಸಿಲಿಂಡರ್‌ಗೆ ಡಿಕ್ಕಿ ಹೊಡೆದಿದೆ. ರೈಲು ಹಳಿಯ ಮೇಲಿದ್ದ ಸಿಲಿಂಡರ್‌ನ್ನು ನೋಡಿ ಚಾಲಕ ರಾಜ್ ಕಿಶೋರ್ ರೈಲಿನ ತುರ್ತು ಬ್ರೇಕ್ ಬಳಸಿ ನಿಲ್ಲಿಸಿದ್ದಾರೆ.
ಕಾನೂನು ಮತ್ತು ಸುವ್ಯವಸ್ಥೆ ಎಸಿಪಿ ಹರೀಶ್ ಚಂದ್ರ ಪ್ರತಿಕ್ರಿಯಿಸಿ, “ಹಳಿಗಳ ಮೇಲೆ ಇಡಲಾಗಿದ್ದ ಎಲ್‌ಪಿಜಿ ಸಿಲಿಂಡರ್ ಅನ್ನು ಲೋಕೋ ಪೈಲಟ್ ಗಮನಿಸಿದ್ದು ತುರ್ತು ಬ್ರೇಕ್ ಹಾಕಿದ್ದಾರೆ. ಘರ್ಷಣೆಯಿಂದಾಗಿ ಸಿಲಿಂಡರ್‌ಗೆ ಬದಿಗೆ ಸರಿದಿದೆ. ಲೋಕೋ ಪೈಲಟ್ ಈ ಬಗ್ಗೆ ಗಾರ್ಡ್ ಮತ್ತು ಗೇಟ್ಮ್ಯಾನ್ಗೆ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ರೈಲು ಶಿವರಾಜ್ಫುರ ಪ್ರದೇಶದಲ್ಲಿ 20 ನಿಮಿಷ ರೈಲು ನಿಂತಿತ್ತು” ಎಂದರು.
“ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಸ್ಥಳದಲ್ಲಿದ್ದ ಪೆಟ್ರೋಲ್ ಮತ್ತು ಬೆಂಕಿಪೊಟ್ಟಣವನ್ನೂ ಜಪ್ತಿ ಮಾಡಲಾಗಿದೆ. ತಪ್ಪಿತಸ್ಥರನ್ನು ಪತ್ತೆ ಹಚ್ಚುವ ಕಾರ್ಯ ನಡೆಯುತ್ತಿದ್ದು, ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಅವರು ತಿಳಿಸಿದರು..

