ಕೋಲ್ಕತ್ತಾ : ಆರ್‌ಜಿಕರ್ ವೈದ್ಯಕೀಯ ಕಾಲೇಜಿನ ತರಬೇತಿ ವೈದ್ಯೆ ಮೇಲಿನ ಅತ್ಯಾಚಾರ, ಕೊಲೆ ಪ್ರಕರಣದ ವಿರುದ್ಧ ಧರಣಿ ನಡೆಸಿದ ಪ್ರತಿಭಟನಾನಿರತ ವೈದ್ಯರು ಇಟ್ಟಿರುವ ಬೇಡಿಕೆಗಳನ್ನು ಈಡೇರಿಸಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಪ್ಪಿಗೆ ಸೂಚಿಸಿದ್ದು, ಅದರಂತೆ ಕೋಲ್ಕತ್ತಾದ ಉನ್ನತ ಪೊಲೀಸ್ ಅಧಿಕಾರಿ ಹಾಗೂ ಇಬ್ಬರು ಆರೋಗ್ಯ ಅಧಿಕಾರಿಗಳ ವಜಾ ಮಾಡುವುದಾಗಿ ಘೋಷಿಸಿದ್ದಾರೆ.
ಪ್ರತಿಭಟನಾನಿರತ ವೈದ್ಯರೊಂದಿಗೆ ನಡೆಸಿದ ಸಭೆಯಲ್ಲಿ ಐದು ಬೇಡಿಕೆಗಳ ಪೈಕಿ ಮೂರನ್ನು ಈಡೇರಿಸುವುದಾಗಿ ಸಿಎಂ ಭರವಸೆ ನೀಡಿದ್ದಾರೆ. ವೈದ್ಯರ ಬೇಡಿಕೆಗಳಲ್ಲಿ ಶೇ.99ರಷ್ಟನ್ನು ಒಪ್ಪಿಕೊಂಡಿದ್ದೇನೆ. ಅವರೆಲ್ಲ ನನ್ನ ಸೋದರ ಸಂಬಂಧಿಗಳಿದ್ದಂತೆ. ನಾನು ರೋಗಿಗಳ ಸ್ಥಿತಿಯನ್ನು ಉಲ್ಲೇಖಿಸಿ, ವಿಶೇಷವಾಗಿ ಕೆಲವು ಜಿಲ್ಲೆಗಳಲ್ಲಿನ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
ಮಮತಾ ಬ್ಯಾನರ್ಜಿ ಅವರು ಆಸ್ಪತ್ರೆಯ ಮೂಲಸೌಕರ್ಯಗಳ ಉನ್ನತೀಕರಣದ ಬೇಡಿಕೆಗಳನ್ನು ಒಪ್ಪಿಕೊಂಡಿದ್ದಾರೆ. ಅದಕ್ಕಾಗಿ 100 ಕೋಟಿ ರೂ. ಮೀಸಲಿಡಲಾಗಿದೆ.ಆರ್‌ಜಿಕರ್ ಬಿಕ್ಕಟ್ಟನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಐದನೇ ಹಾಗೂ ಕಡೇಯ ಬಾರಿಗೆ ಪ್ರತಿಭಟನೆ ನಡೆಸುತ್ತಿರುವ ವೈದ್ಯರನ್ನು ಮಾತುಕತೆಗೆ ಆಹ್ವಾನಿಸಿದ್ದರು.
ಆಗಸ್ಟ್ 9ರಿಂದ ಕಿರಿಯ ವೈದ್ಯರು ಪ್ರತಿಭಟನೆ ನಡೆಸುತ್ತಿದ್ದಾರೆ. ನಿರಂತರ ಪ್ರತಿಭಟನೆ ರಾಜ್ಯದ ಆರೋಗ್ಯ ವ್ಯವಸ್ಥೆಯ ಮೇಲೆ ಭಾರಿ ಪರಿಣಾಮ ಬೀರಿದೆ. ಸುಪ್ರೀಂಕೋರ್ಟ್ ಕೂಡ ವೈದ್ಯರಿಗೆ ಕರ್ತವ್ಯಕ್ಕೆ ಮರಳುವಂತೆ ಸೂಚನೆ ನೀಡಿತ್ತು.ಶನಿವಾರ ಪ್ರತಿಭಟನಾ ಸ್ಥಳಕ್ಕೆ ದಿಢೀರ್ ಭೇಟಿ ನೀಡಿದ್ದ ಸಿಎಂ ಮಮತಾ, ಬೇಡಿಕೆಗಳನ್ನು ಆಲಿಸುವ ಭರವಸೆ ನೀಡಿ, ಮಾತುಕತೆಗೆ ಬರುವಂತೆ ಆಹ್ವಾನಿಸಿದ್ದರು.
ಸಭೆಯನ್ನು ನೇರಪ್ರಸಾರ ಮಾಡಬೇಕೆಂದು ಪ್ರತಿಭಟನಾನಿರತ ವೈದ್ಯರು ಪಟ್ಟು ಹಿಡಿದ ಹಿನ್ನೆಲೆಯಲ್ಲಿ ಸಭೆ ಯಶಸ್ವಿಯಾಗಿರಲಿಲ್ಲ. ಇದಾದ ಬಳಿಕ ಹೊರಬಂದ ಮಮತಾ, ನಮನ್ನು ಅವಮಾನಿಸಬೇಡಿ ಎಂದು ಮನವಿ ಮಾಡಿದ್ದರು. ಆದರೆ ವೈದ್ಯರು ಅವರ ಬೇಡಿಕೆಗೆ ಒಪ್ಪಿರಲಿಲ್ಲ. ಬಳಿಕ ಮುಖ್ಯಮಂತ್ರಿಗಳ ನಿವಾಸದ ಗೇಟ್ ಮುಂದೆ 3 ಗಂಟೆ ಕಾದ ಬಳಿಕ ಅವರು ವಿಧಿಯಿಲ್ಲದೇ ಹೊರನಡೆಯುವಂತಾಯಿತು ಎಂದು ಪ್ರತಿಭಟನಾನಿರತ ವೈದ್ಯರು ತಿಳಿಸಿದ್ದರು.

