ಬೆಂಗಳೂರು : ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿ ಬಳಿಯ ಅಪಾರ್ಟ್‌ಮೆಂಟ್‌ನಲ್ಲಿ ನಾಲ್ವರು ವಿದೇಶಿ ಪ್ರಜೆಗಳು ಸೇರಿದಂತೆ ಓರ್ವ ಪಾಕಿಸ್ತಾನ ಪ್ರಜೆ ಬಂಧಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ನೀಡಿದ ಮಾಹಿತಿಯನ್ನಾಧರಿಸಿ ಭಾನುವಾರ ತಡರಾತ್ರಿ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿಸಲಾಗಿದೆ.
ಈ ಪಾಕಿಸ್ತಾನ ಪ್ರಜೆಯು ತನ್ನ ಬಾಂಗ್ಲಾದೇಶ ಮೂಲದ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ಜಿಗಣಿಯ ಅಪಾರ್ಟ್ ಮೆಂಟ್ವೊಂದರಲ್ಲಿ ನೆಲಸಿದ್ದ. ಕಳೆದ ವಾರ ಬೆಂಗಳೂರಿನಲ್ಲಿ ಉಲ್ಫಾ ಸಂಘಟನೆಯ ಉಗ್ರನೊಬ್ಬನನ್ನು ಬಂಧಿಸಿದ ನಂತರ ಈ ಪಾಕ್ ಪ್ರಜೆಯೂ ಬೆಂಗಳೂರಿನಲ್ಲಿಯೇ ನೆಲೆಸಿರುವ ಬಗ್ಗೆ ಮಾಹಿತಿ ಲಭ್ಯವಾಗಿತ್ತು.
ಪಾಕ್ ಪ್ರಜೆಗಳ ಹೆಸರು ರಷೀದ್ ಸಿದ್ದಿಕಿ@ ಶಂಕರ್ ಶರ್ಮಾ (48), ಆಯುಷಾ ಅನಿಫ್@ಆಶಾ ಶರ್ಮಾ(38), ಮೊಹಮ್ಮದ್ ಹನೀಫ್@ರಾಮ್ ಬಾಬಾ ಶರ್ಮಾ(73), ರುಬೀನಾ@ರಾಣಿ ಶರ್ಮಾ(61) ಬಂಧಿತರು.
ಜಿಗಣಿ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ. ಪಾಕ್ ಪ್ರಜೆ ಬಂಧನದ ಹಿನ್ನೆಲೆ ಹಿರಿಯ ಪೊಲೀಸ್ ಅಧಿಕಾರಿಗಳು ದೌಡಾಯಿಸಿದ್ದಾರೆ. ಬೆಂಗಳೂರು ಗ್ರಾಮಾಂತರದ ಹೆಚ್ಚುವರಿ ಎಸ್‌ಪಿ ಕೆ ಎಸ್ ನಾಗರಾಜ್ ಭೇಟಿ ನೀಡಿ ಇನ್ಸ್‌ಸ್ಪೆಕ್ಟರ್ ಮಂಜುನಾಥ್ ಬಳಿ ಮಾಹಿತಿ ಸಂಗ್ರಹಿಸಿದ್ದಾರೆ.
ಕಠಿಣ ಕ್ರಮ : ಪರಮೇಶ್ವರ್
ಬೆಂಗಳೂರಿನಲ್ಲಿ ನೆಲೆಸಿದ್ದ ಪಾಕಿಸ್ತಾನದ ಪ್ರಜೆ ಹಾಗೂ ಹಲವು ಬಾಂಗ್ಲ ದೇಶೀಯರ ಬಗ್ಗೆ ತನಿಖೆ ನಡೆಯುತ್ತಿದ್ದು, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಗೃಹಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ರೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಬಂದಿರುವ ಮಾಹಿತಿ ಪ್ರಕಾರ ಹತ್ತು ವರ್ಷದಿಂದ ಭಾರತದಲ್ಲಿದ್ದಾರೆ. ನಾಲ್ವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಯಾವ ಉದ್ದೇಶದಿಂದ ಬೆಂಗಳೂರಿಗೆ ಬಂದಿದ್ದರು ಎಂಬುದು ಹೊರಬರಲಿದೆ. ಹತ್ತು ವರ್ಷದ ಹಿಂದೆ ಭಾರತಕ್ಕೆ ಬಂದಿದ್ದರು ಎಂಬುದು ಸತ್ಯವಾಗಿದ್ದರೆ, ಕೇಂದ್ರ ಗುಪ್ತದಳದ ಗಮನಕ್ಕೆ ಬರಲಿಲ್ಲ. ಬಂಧಿತರು ಪಾಸ್‌ಪೋರ್ಟ್ ಮಾಡಿಸಿಕೊಳ್ಳುವ ಮಟ್ಟಕ್ಕೆ ಹೋಗಿದ್ದರು. ಹೆಸರು ಬದಲಾಯಿಸಿಕೊಂಡಿದ್ದಾರೆ. ತನಿಖೆಯಲ್ಲಿ ಏನೆಲ್ಲ ಮಾಹಿತಿಗಳು ಹೊರಬರುತ್ತವೆ ಎಂಬುದನ್ನು ನೋಡೋಣ ಎಂದು ತಿಳಿಸಿದರು.
ಬಹಳ ಜನ ಬಾಂಗ್ಲಾ ದೇಶದವರು ಬಂದಿದ್ದಾರೆ. ಪ್ರತಿನಿತ್ಯ ಅವರನ್ನು ವಶಕ್ಕೆ ಪಡೆದು ವರದಿ ನೀಡುತ್ತಿದ್ದೇವೆ. ಬಾಂಗ್ಲಾ ಗಡಿಯಲ್ಲಿ ನುಸುಳದಂತೆ ಬಂದೋಬಸ್ತ್ ಹೆಚ್ಚಿಸಬೇಕು. ಕೇಂದ್ರ ಸರ್ಕಾರದ ಗಮನಕ್ಕೆ ತರುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಬಾಂಗ್ಲಾ ದೇಶದ ಹೈಕಮೀಷನ್‌ಗೂ ಮಾಹಿತಿ ನೀಡುತ್ತೇವೆ ಎಂದರು.

