ನವದೆಹಲಿ: ವಿವಾದಿತ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಅವರ ಸಾಮಾಜಿಕ ಮಾಧ್ಯಮ ವೇದಿಕೆ ‘X’ ಖಾತೆಗೆ ಭಾರತದಲ್ಲಿ ನಿರ್ಬಂಧ ಹೇರಲಾಗಿದೆ. ಪಾಕಿಸ್ತಾನಕ್ಕೆ ವಿವಾದಾತ್ಮಕ ಬೋಧಕ ಭೇಟಿ ನೀಡಿದ್ದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಖಂಡನೆ ಮಾಡಿದ ಕೆಲವೇ ಗಂಟೆಗಳ ನಂತರ ಈ ಬೆಳವಣಿಗೆ ನಡೆದಿದೆ.
ಪರಾರಿಯಾಗಿರುವ ಭಾರತೀಯನೊಬ್ಬನಿಗೆ ಪಾಕಿಸ್ತಾನದಲ್ಲಿ ಉನ್ನತ ಮಟ್ಟದ ಸ್ವಾಗತ ಸಿಕ್ಕಿರುವುದು ನಮಗೆ ಆಶ್ಚರ್ಯವೇನಿಲ್ಲ. ಇದು ನಿರಾಶಾದಾಯಕ ಮತ್ತು ಖಂಡನೀಯ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.
ನಾಯಕ್ ಅವರ ಪಾಸ್‌ಪೋರ್ಟ್ ಕುರಿತ ಪ್ರಶ್ನೆಗೆ ಜೈಸ್ವಾಲ್, ನಾಯಕ್ ಪಾಕಿಸ್ತಾನಕ್ಕೆ ಯಾವ ಪಾಸ್‌ಪೋರ್ಟ್ ಪ್ರಯಾಣಿಸಿದ್ದಾರೆ ಎಂಬುದರ ಕುರಿತು ಭಾರತಕ್ಕೆ ಸ್ಪಷ್ಟವಾಗಿಲ್ಲ ಎಂದು ಹೇಳಿದರು.
ಮಂಗಳವಾರ ಒಂದು ತಿಂಗಳ ಭೇಟಿಗಾಗಿ ಪಾಕಿಸ್ತಾನಕ್ಕೆ ಸರ್ಕಾರದ ಆಹ್ವಾನದ ಮೇರೆಗೆ ಆಗಮಿಸಿದ ನಾಯಕ್ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಲಾಯಿತು. ನಂತರ ಅವರು ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಉಪ ಪ್ರಧಾನಿ ಇಶಾಕ್ ದಾರ್ ಅವರನ್ನು ಭೇಟಿಯಾದರು.
ಅವರ ಭೇಟಿಯ ಸಮಯದಲ್ಲಿ, ನಾಯಕ್ ಅವರು ಇಸ್ಲಾಮಾಬಾದ್, ಕರಾಚಿ ಮತ್ತು ಲಾಹೋರ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಭಾಷಣಗಳ ಸರಣಿಯನ್ನು ಮಾಡಲಿದ್ದಾರೆ.
ಮನಿ ಲಾಂಡರಿಂಗ್ ಮತ್ತು ದ್ವೇಷದ ಭಾಷಣಗಳ ಮೂಲಕ ಉಗ್ರವಾದವನ್ನು ಪ್ರಚೋದಿಸುವ ಆರೋಪಕ್ಕೆ ಸಂಬಂಧಿಸಿದ ಹಲವಾರು ಪ್ರಕರಣಗಳಲ್ಲಿ ಅವರು ಭಾರತೀಯ ಅಧಿಕಾರಿಗಳಿಗೆ ಬೇಕಾಗಿದ್ದಾರೆ. 2016 ರಿಂದ, ನಾಯಕ್ ಅವರ ವಿರುದ್ಧ ಕಾನೂನು ಕ್ರಮಗಳನ್ನು ಪ್ರಾರಂಭಿಸಿದ ನಂತರ ಮಲೇಷ್ಯಾದಲ್ಲಿ ನೆಲೆಸಿದ್ದಾರೆ. ಭಾರತವು ನಾಯಕ್ ಅವರ ಹಸ್ತಾಂತರಕ್ಕೆ ಕೋರಿದೆ, ಆದರೆ ಮಲೇಷ್ಯಾ ಈ ವಿನಂತಿಯನ್ನು ಇನ್ನೂ ಪರಿಗಣಿಸಿಲ್ಲ.

