ಮೈಸೂರು : ನವರಾತ್ರಿಯ 9ನೇ ದಿನ ಇಂದು (ಅ.11) ಆಯುಧ ಪೂಜೆ. ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಕಾರ್ಯಕ್ರಮ ಆರಂಭವಾಗಿದೆ.ಸೂರು ಅರಮನೆಯಲ್ಲಿ ರಾಜವಂಶಸ್ಥರ ಆಯುಧ ಪೂಜಾ ಕೈಕಂರ್ಯಗಳು ನೆರವೇರಿವೆ. ಅರಮನೆಯ ಪೂರ್ವಜರು ಬಳಸುತ್ತಿದ್ದ ಆಯುಧಗಳನ್ನು ಸ್ವಚ್ಛಗೊಳಿಸಿ, ಅವುಗಳನ್ನು ಮಂಗಳವಾದ್ಯದೊಂದಿಗೆ ಅರಮನೆಗೆ ತೆಗೆದುಕೊಂಡು ಹೋಗಿ ಪೂಜೆ ಸಲ್ಲಿಸಲಾಗಿದೆ.
ಬೆಳಗ್ಗೆಯಿಂದಲೇ ಅರಮನೆಯಲ್ಲಿ ಸಾಂಪ್ರದಾಯಿಕ ಆಯುಧ ಪೂಜಾ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ಪುರಾತನ ರಾಜವಂಶಸ್ಥರು ಬಳಸುತ್ತಿದ್ದ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯದ ಬಳಿ ತೆಗೆದುಕೊಂಡು ಹೋಗಿ ಸ್ವಚ್ಚಗೊಳಿಸಲಾಯಿತು. ಬಳಿಕ ರಾಜಪರಂಪರೆಯಂತೆ ಪಲ್ಲಕ್ಕಿಯಲ್ಲಿ ಆಯುಧಗಳನ್ನು ಇಟ್ಟು ಪಟ್ಟದ ಆನೆ, ಪಟ್ಟದ ಹಸು ಜತೆಗೆ ಮಂಗಳವಾದ್ಯಗಳ ಮೂಲಕ ಆಯುಧಗಳನ್ನು ಕಲ್ಯಾಣ ಮಂಟಪಕ್ಕೆ ತೆಗೆದುಕೊಂಡು ಹೋಗಿ ಇಡಲಾಯಿತು.
ಬೆಳಗ್ಗೆ 6ಕ್ಕೆ ಚಾಮುಂಡಿ ತೊಟ್ಟಿಯಲ್ಲಿ ಚಂಡಿಕಾ ಹೋಮ ನಡೆಯಿತು. ಆ ವೇಳೆಗೆ ಆನೆ ಬಾಗಿಲಿಗೆ ಪಟ್ಟದ ಹಸು ಆಗಮನವಾಯಿತು. ಬೆಳಗ್ಗೆ 6.40ರಿಂದ 7.10ರ ಸಮಯದಲ್ಲಿ ಅರಮನೆ ಕಲ್ಯಾಣ ಮಂಟಪದಿಂದ ಆನೆ ಬಾಗಿಲಿನ ಮೂಲಕ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಾಲಯಕ್ಕೆ ತೆಗೆದುಕೊಂಡು ಹೋಗಿ, ಅಲ್ಲಿ ಅವುಗಳನ್ನು ಸ್ವಚ್ಛಗೊಳಿಸಿ 7.30ರಿಂದ 8 ಗಂಟೆಯವರೆಗೆ ಕಲ್ಯಾಣ ಮಂಟಪಕ್ಕೆ ತರಲಾಯಿತು. ಬೆಳಗ್ಗೆ 9.05ಕ್ಕೆ ಚಂಡಿಕಾ ಹೋಮ, ಪೂರ್ಣಾಹುತಿ ಆದ ಬಳಿಕ ಮಧ್ಯಾಹ್ನ 12.20ರಿಂದ 12.45ರವರೆಗೆ ಕಲ್ಯಾಣ ಮಂಟಪದಲ್ಲಿ ಯದುವೀರ್ ಆಯುಧಗಳಿಗೆ ಪೂಜೆ ಸಲ್ಲಿಸಿದರು.
ಇತಿಹಾಸ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವಕ್ಕೆ ಅ.3 ರಂದು ಅದ್ಧೂರಿ ಚಾಲನೆ ಸಿಕ್ಕಿದೆ. ಸಾಂಸ್ಕೃತಿಕ ನಗರಿಯಲ್ಲಿ ವಿವಿಧ ಕಾರ್ಯಕ್ರಮಗಳು, ಮೇಳಗಳು ನಡೆಯುತ್ತಿವೆ. ಇದೇ ಅ.12 ರಂದು ಜಂಬೂಸವಾರಿ ನಡೆಯಲಿದೆ. ದಸರಾ ವೈಭವವನ್ನು ನೋಡಲು ದೇಶ-ವಿದೇಶಗಳಿಂದ ಜನರು ಮೈಸೂರಿಗೆ ಆಗಮಿಸುತ್ತಿದ್ದಾರೆ. ಅರಮನೆ, ರಾಜಮನೆತನವೇ ಕೇಂದ್ರವಾಗಿರುವ ಮೈಸೂರು ದಸರಾ ಈ ಬಾರಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್‌ಗೆ ವಿಶೇಷವಾದದ್ದು. ರಾಜನಾಗಿಯೂ, ಜನಪ್ರತಿನಿಧಿಯಾಗಿಯೂ ಎರಡು ಗುರುತರ ಜವಾಬ್ದಾರಿಗಳೊಂದಿಗೆ ದಸರಾದಲ್ಲಿ ಪಾಲ್ಗೊಳ್ಳುತ್ತಿರುವುದು ಅವರ ಪಾಲಿಗೆ ವಿಶೇಷ.
ಮೈಸೂರು ಅರಮನೆಯ ದರ್ಬಾರ್ ಅಂಗಳದಲ್ಲಿ ಶರನ್ನವರಾತ್ರಿ ಪ್ರಯುಕ್ತ ಗುರುವಾರ ರಾಜವಂಶಸ್ಥ ಯದುವೀರ್ ಒಡೆಯರ್ 10ನೇ ಬಾರಿಗೆ ಖಾಸಗಿ ದರ್ಬಾರ್ ನಡೆಸಿದರು. ಸಂಸದರಾದ ಬಳಿಕ ಇದೇ ಮೊದಲ ದರ್ಬಾರ್ ಆಗಿದೆ. ಪಟ್ಟದ ಆನೆ, ಪಟ್ಟದ ಕುದುರೆ, ಪಟ್ಟದ ಹಸು, ಪಟ್ಟದ ಒಂಟೆಗೆ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ಬಳಿಕ ಅರಮನೆಯಲ್ಲಿ ಸಿಂಹಾಸನಾರೂಢರಾಗಿ ಖಾಸಗಿ ದರ್ಬಾರ್ ನಡೆಸಿದರು. ಪ್ರಮೋದಾದೇವಿ ಒಡೆಯರ್, ತ್ರಿಷಿಕಾ ಕುಮಾರಿ ಒಡೆಯರ್ ಹಾಗೂ ಆದ್ಯವೀರ ನರಸಿಂಹರಾಜ ಒಡೆಯರ್ ಕೂಡ ಪಾಲ್ಗೊಂಡಿದ್ದರು.

