ಬೆಂಗಳೂರು: ಬಿಬಿಎಂಪಿ 8 ವಲಯಗಳ ಒಂದೊಂದು ಸ್ಥಳದಲ್ಲಿ ನೀಡುವ ಸ್ಥಳಕ್ಕೆ ಇಂದು ಪ್ರಾಯೋಗಿಕವಾಗಿ ಚಾಲನೆ ನೀಡಲಾಗಿದ್ದು, ಯಶಸ್ವಿಯಾದರೆ ಎಲ್ಲಾ ಕಡೆ ಅನುಷ್ಠಾನಗೊಳಿಸಲಾಗುವುದೆಂದು ಪಶು ಸಂಗೋಪನಾ ವಿಭಾಗದ ವಿಶೇಷ ಆಯುಕ್ತರಾದ ಸುರಳ್ಕರ್ ವಿಕಾಸ್ ಕಿಶೋರ್ ರವರು ತಿಳಿಸಿದರು.
ಬಿಬಿಎಂಪಿಯ ಪಶುಸಂಗೋಪನಾ ಇಲಾಖೆ ವತಿಯಿಂದ ಎಲ್ಲಾ ವಲಯಗಳ ಆಯ್ದ ಸ್ಥಳಗಳಲ್ಲಿ ಇಂದು ಶ್ವಾನ ಮಹೋತ್ಸವ(ಕುಕುರ್ ತಿಹಾರ್) ಆಚರಿಸಲಾಗಿದ್ದು, ಪಾಲಿಕೆ ಕೇಂದ್ರ ಕಛೇರಿಯ ಡಾ. ರಾಜ್ ಕುಮಾರ್ ಗಾಜಿನ ಮನೆಯ ಬಳಿ ಚಾಲನೆ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹಬಾಳ್ವೆ ಹಾಗೂ ಒನ್ ಹೆಲ್ತ್ ಭಾಗವಾಗಿ ಬೀದಿ ನಾಯಿಗಳಿಗೆ ಆಹಾರ ನೀಡುವ ಪ್ರಕ್ರಿಯೆಯನ್ನು ಆರಂಭಿಸಲಾಗುತ್ತಿದೆ ಎಂದು ಹೇಳಿದರು.
ಈ ಯೋಜನೆಯಡಿ ಪೌರಕಾರ್ಮಿಕರು, ಆರೋಗ್ಯ ಅಧಿಕಾರಿಗಳು, ಪಶುಸಂಗೋಪನೆ ಅಧಿಕಾರಿಗಳು, ಪ್ರಾಣಿ ಪ್ರಿಯರು, ಪ್ರಾಣಿ ಪಾಲಕರು ಮತ್ತು ಆಸಕ್ತ ನಾಗರಿಕರು ಒಟ್ಟಾಗಿ ಹೋಟೆಲ್/ರೆಸ್ಟೋರೆಂಟ್ ಗಳಿಮದ ಬೀದಿ ನಾಯಿಗಳಿಗೆ ಆಹಾರ ನೀಡುವ ಕೆಲಸ ಮಾಡುತ್ತದೆ. ಸಮುದಾಯ ನಾಯಿಗಳಿಗೆ ಆಹಾರ ದೊರಕದ ಪ್ರದೇಶಗಳಲ್ಲಿ ದಿನಕ್ಕೆ ಒಂದು ಬಾರಿ ಆಹಾರ ನೀಡುವುದು ಇದರ ಪ್ರಮುಖ ಉದ್ದೇಶವಾಗಿದೆ ಎಂದು ಹೇಳಿದರು.
ಪಾಲಿಕೆಯ 8 ವಲಯುಗಳಲ್ಲಿ ಗುರುತಿಸಿರುವ ಆಹಾರ ನೀಡುವ ಸ್ಥಳಗಳಲ್ಲಿಯೇ ಪ್ರತಿನಿತ್ಯ ಬೀದಿ ನಾಯಿಗಳಿಗೆ ಆಹಾರ ನೀಡಲಾಗುವುದು. ಸ್ಥಳದಲ್ಲಿ ಬೌಲ್, ನೀರು ಹಾಗೂ ಆಹಾರ ನೀಡುವ ಸ್ಥಳ ಎಂಬ ನಾಮಫಲಕದ ವ್ಯವಸ್ಥೆ ಮಾಡಲಾಗಿರುತ್ತದೆ. ಒಂದು ತಿಂಗಳ ಕಾಲ ಪ್ರಾಯೋಗಿಕವಾಗಿ ಪರಿಶೀಲಿಸಲಾಗುವುದು. ಈ ವೇಳೆ ಸಾರ್ವಜನಿಕರ ಸ್ಪಂದನೆ, ಆಹಾರ ನೀಡುವ ಸ್ಥಳ, ಸಮಯ, ಸ್ಥಳೀಯ ಪ್ರದೇಶಗಳಲ್ಲಿ ಬರುವ ಸಲಹೆ-ಸೂಚನೆಗಳು ಹಾಗೂ ಆಕ್ಷೇಪಣೆಗಳನ್ನು ಪರಿಶೀಲಿಸಲಾಗುವುದು. ಏನಾದರು ನ್ಯೂನ್ಯತೆಗಳಿದ್ದರೆ ಅದನ್ನು ಸರಿಪಡಿಸಿಕೊಂಡು ಪಾಲಿಕೆಯ ಎಲ್ಲಾ ಕಡೆ ಅನುಷ್ಠಾನಕ್ಕೆ ತರಲು ಸೂಕ್ತ ಕ್ರಮವಹಿಸಲಾಗುವುದು.
ಪಾಲಿಕೆ ವ್ಯಾಪ್ತಿಯ ಸ್ಥಳೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಮಾಲೀಕರೊಟ್ಟಿಗೆ ಉಳಿಯುವ ಆಹಾರವನ್ನು ಬೀದಿ ನಾಯಿಗಳಿಗೆ ನೀಡುವ ಕುರಿತು ಚರ್ಚಿಸಲಾಗಿದ್ದು, ಅದಕ್ಕೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ಬೀದಿ ನಾಯಿಗಳಿಗೆ ಮಸಾಲೆ, ಎಣ್ಣೆ ಸೇರಿದಂತೆ ನಾಯಿಗಳಲ್ಲಿ ರೋಷ ಹೆಚ್ಚಲು ಕಾರಣವಾಗುವ ಅಂಶಗಳಿಲ್ಲದ ಆರೋಗ್ಯಕರ ಮತ್ತು ರುಚಿಕರವಾದ ಆಹಾರವನ್ನು ಒದಗಿಸಲು ಆಯಾ ಪ್ರದೇಶಗಳಲ್ಲಿನ ಹೋಟೆಲ್ ಗಳಿಗೆ ತಿಳಿಸಲಾಗಿದೆ ಎಂದು ಹೇಳಿದರು.
ಪಾಲಿಕೆ ವ್ಯಾಪ್ತಿಯಲ್ಲಿ 2.70 ಲಕ್ಷಕ್ಕೂ ಹೆಚ್ಚು ಬೀದಿ ನಾಯಿಗಳಿವೆ. ಬೀದಿ ನಾಯಿಗಳ ಕಚ್ಚುವ ಸಂಖ್ಯೆ, ಕೋಪಗೊಳ್ಳುವದನ್ನು ನಾವು ತಡೆಯಬೇಕಿದೆ. ಈ ಬಗ್ಗೆ ಪಶು ವೈದ್ಯರು, ಪರಿಣಿತ ತಜ್ಞರು, ಪ್ರಾಣಿ ಪ್ರಿಯ ಸ್ವಯಂಸೇವಕರು ಬಳಿ ಚರ್ಚೆ ನಡೆಸಿದಾಗ ಬೀದಿ ನಾಯಿಗಳಿಗೆ ಆಹಾರ ಸರಿಯಾಗಿ ಸಿಗದಿರುವ ಪರಿಣಾಮ ಕಚ್ಚುವ ಹಾಗೂ ಉದ್ರೇಕಗೊಳ್ಳುಬ ಘಟನೆಗಳು ನಡೆಯುತ್ತಿವೆ ಎಂಬುದು ತಿಳಿದು ಬಂದಿದೆ. ಈ ನಿಟ್ಟಿನಲ್ಲಿ ಬೀದಿ ನಾಯಿಗಳಿಗೆ ಆಹಾರ ಸಿಗುವಂತಾಗಬೇಕೆಂಬ ಉದ್ದೇಶದಿಂದ ಈ ಕ್ರಮವನ್ನು ಅನುಸರಿಸಲಾಗುತ್ತಿದೆ.
ಶ್ವಾನ ಮಹೋತ್ಸವ ಆಚರಣೆ:
ಪಾಲಿಕೆಯ ಪಶಸುಸಂಗೋಪನಾ ವಿಬಾಗದಿಂದ ಇಂದು 8 ಕಡೆ ಶ್ವಾನ ಮಹೋತ್ಸವ [ಕುಕುರ್ ತಿಹಾರ್] ಆಚರಿಸುವ ಮೂಲಕ ಬೀದಿ ಬದಿ ನಾಯಿಗಳಿಗೆ ಆಹಾರ ಸಿಗುವಂತೆ ಮಾಡಲಾಗಿದೆ. ಸಮುದಾಯದ ನಾಯಿಗಳಿಗೆ ಆಹಾರ ನೀಡಲು ಪಾಲಿಕೆ ಜೊತೆ ಕೈ ಜೋಡಿಸಲು ಸ್ಥಳೀಯ ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ.