ಬೆಂಗಳೂರು : ರಾಜ್ಯಕ್ಕೆ ಪ್ರತ್ಯೇಕ ಧ್ವಜ ಹೊಂದುವ ಕುರಿತು ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇಂದು ವಜಾ ಮಾಡಿದೆ.
ಬೆಳಗಾವಿಯ ಸಾಮಾಜಿಕ ಕಾರ್ಯಕರ್ತ ಭೀಮಪ್ಪ ಗಡಾದ್ ಎಂಬುವವರು ಸಲ್ಲಿಸಿದ್ದ ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಎನ್.ವಿ. ಅಂಜಾರಿಯಾ ಮತ್ತು ನ್ಯಾ.ಕೆ ವಿ ಅರವಿಂದ್ ಅವರ ವಿಭಾಗೀಯ ಪೀಠ ಪಿಐಎಲ್ ವಜಾಗೊಳಿಸಿ ಆದೇಶಿಸಿದೆ.
ಪ್ರತ್ಯೇಕ ನಾಡ ಧ್ವಜ ವಿಚಾರ ಕೋರ್ಟ್ ವ್ಯಾಪ್ತಿಗೆ ಒಳಪಡಲ್ಲ. ತಪ್ಪಾಗಿ ಅರ್ಥೈಸಿಕೊಂಡು ಪಿಐಎಲ್ ಸಲ್ಲಿಕೆ ಮಾಡಲಾಗಿದೆ. ಆದ್ದರಿಂದ ಈ ಅರ್ಜಿಯನ್ನು ವಜಾ ಮಾಡಲಾಗಿದೆ. ಮನವಿಯ ಊರ್ಜಿತತ್ವಕ್ಕೆ ಸಂಬಂಧಿಸಿ ಕೋರ್ಟ್ ಅಭಿಪ್ರಾಯವನ್ನು ವ್ಯಕ್ತಪಡಿಸಿಲ್ಲ ಎಂದಿರುವ ಪೀಠವು ಅರ್ಜಿಯನ್ನು ವಜಾಗೊಳಿಸಿದೆ.
ಮಾ.8ರಂದು (2018) ಸಿಎಂ ಸಿದ್ದರಾಮಯ್ಯ ಅವರು ಹಳದಿ, ಬಿಳಿ ಮತ್ತು ಕೆಂಪು ವರ್ಣಗಳ ನಡುವೆ ಗಂಡಭೇರುಂಡ ಚಿಹ್ನೆ ಹೊಂದಿರುವ ಧ್ವಜವನ್ನು ಸಾರ್ವಜನಿಕವಾಗಿ ಅನಾವರಣಗೊಳಿಸಿದ್ದರು. ಈ ಧ್ವಜಕ್ಕಾಗಿ ಕೇಂದ್ರ ಸರ್ಕಾರದಿಂದ ಮಾನ್ಯತೆಗೆ ಕೋರಲಾಗಿತ್ತು.

