ಹೊಸದಿಲ್ಲಿ: ಯುಪಿಎಸ್‌ಸಿ ಅಭ್ಯರ್ಥಿಗಳಿಗೆ ಕೋಚಿಂಗ್ ನೀಡುವ ʼಓಝಾ ಸರ್ʼ ಎಂದೇ ಜನಪ್ರಿಯರಾಗಿರುವ ಉತ್ತರ ಪ್ರದೇಶದ ಶಿಕ್ಷಕ ಅವಧ್ ಓಜಾ ಸೋಮವಾರ ಆಮ್ ಆದ್ಮಿ ಪಕ್ಷ ಸೇರ್ಪಡೆಯಾದರು.
ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಹಾಗೂ ಹಿರಿಯ ನಾಯಕ ಮನೀಷ್ ಸಿಸೋಡಿಯಾರೊಂದಿಗೆ ಆಮ್ ಆದ್ಮಿ ಪಕ್ಷದ ಕಚೇರಿಗೆ ತಲುಪಿದ ಅವಧ್ ಓಜಾ, ಅವರಿಬ್ಬರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾದರು.
ಸ್ವಥ ಯುಪಿಎಸ್ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿರುವ ಓಝಾ ಸರ್ 2005ರಲ್ಲಿ ದಿಲ್ಲಿಯ ಮುಖರ್ಜಿ ನಗರ್ ಪ್ರದೇಶದಲ್ಲಿ ಯುಪಿಎಸ್ಸಿ ತರಬೇತಿ ಸಂಸ್ಥೆಯನ್ನು ತೆರೆದರು. ಹೊಸದಿಲ್ಲಿಯಲ್ಲಿನ ಹಲವಾರು ಪ್ರಖ್ಯಾತ ಐಎಎಸ್ ತರಬೇತಿ ಸಂಸ್ಥೆಗಳಲ್ಲಿ ಬೋಧಕರಾಗಿ ಕೆಲಸ ಮಾಡಿರುವ ಓಜಾ, 2019ರಲ್ಲಿ ಐಕ್ಯೂಆರ್ಎ ಐಎಎಸ್ ಅಕಾಡೆಮಿಯನ್ನು ಸ್ಥಾಪಿಸಿದ್ದರು.
ಓಝಾ ಸರ್ ಮೊದಲ ಪ್ರತಿಕ್ರಿಯೆ :
ಪಕ್ಷಕ್ಕೆ ಸೇರ್ಪಡೆಯಾದ ನಂತರ, ರಾಜಕೀಯಕ್ಕೆ ಪ್ರವೇಶಿಸುವ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡಲು ತಮಗೆ ಅವಕಾಶ ನೀಡಿದ ಕೇಜ್ರಿವಾಲ್ ಹಾಗೂ ಸಿಸೋಡಿಯಾ ಸೇರಿದಂತೆ ಆಮ್ ಆದ್ಮಿ ಪಕ್ಷದ ನಾಯಕತ್ವಕ್ಕೆ ಅವಧ್ ಓಜಾ ಧನ್ಯವಾದ ಸಲ್ಲಿಸಿದರು. ರಾಜಕೀಯ ಪ್ರವೇಶಿಸಿದ ನಂತರ, ಶೈಕ್ಷಣಿಕ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸುವುದು ನನ್ನ ಪ್ರಮುಖ ಆದ್ಯತೆ ಎಂದು ಅವರು ಹೇಳಿದರು.
ಕೇಜ್ರಿವಾಲ್ ಶ್ಲಾಘನೆ :
“ಅವಧ್ ಓಜಾ ಲಕ್ಷಾಂತರ ಯುವಕರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಅವರನ್ನು ಉದ್ಯೋಗಿಗಳನ್ನಾಗಿಸಿ, ಉತ್ತಮ ಜೀವನ ನಡೆಸುವಂತೆ ಮಾಡಿದ್ದಾರೆ. ಅವರು ರಾಜಕೀಯವನ್ನು ಪ್ರವೇಶಿಸಿರುವುದರಿಂದ, ದೇಶದ ಶೈಕ್ಷಣಿಕ ವಲಯಕ್ಕೆ ಲಾಭವಾಗಲಿದ್ದು, ದೇಶದ ಅಭಿವೃದ್ಧಿಗೆ ದೊಡ್ಡ ಪ್ರಮಾಣದಲ್ಲಿ ನೆರವು ದೊರೆಯಲಿದೆ” ಎಂದು ಅರವಿಂದ್ ಕೇಜ್ರಿವಾಲ್ ಶ್ಲಾಘಿಸಿದರು.

