ಕಾಬೂಲ್: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ನಲ್ಲಿ ಭಯೋತ್ಪಾದಕರು ನಡೆಸಿದ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ನಿರಾಶ್ರಿತರ ಸಚಿವ ಖಲೀಲ್ ಉರ್-ರಹಮಾನ್ ಹಕ್ಕಾನಿ ಹಾಗೂ ಇತರ ಇಬ್ಬರು ಮೃತಪಟ್ಟಿದ್ದಾರೆ. ಈ ದಾಳಿಯ ಹೊಣೆಯನ್ನು ಯಾವುದೇ ಸಂಘಟನೆ ಸದ್ಯಕ್ಕೆ ಹೊತ್ತುಕೊಂಡಿಲ್ಲ.
ಖಲೀಲ್ ಹಕ್ಕಾನಿ ಅಫ್ಘಾನಿಸ್ತಾನದ ಆಂತರಿಕ ಸಚಿವ ಸಿರಾಜುದ್ದೀನ್ ಹಕ್ಕಾನಿಯ ಚಿಕ್ಕಪ್ಪ ಮತ್ತು ತಾಲಿಬಾನ್‌ಗೆ ಪ್ರಮುಖ ನಿಧಿಸಂಗ್ರಹಗಾರರಾಗಿದ್ದ ಇವರ ಸಾವು ತಾಲಿಬಾನ್ ಶ್ರೇಣಿಯೊಳಗೆ ಹೆಚ್ಚುತ್ತಿರುವ ಆಂತರಿಕ ಉದ್ವಿಗ್ನತೆಯ ಬಗ್ಗೆ ಕಳವಳವನ್ನು ಹೆಚ್ಚಿಸಿದೆ.
ಈ ಕುರಿತು ತಾಲಿಬಾನ್ ಸರ್ಕಾರದ ಪ್ರಾಥಮಿಕ ವಕ್ತಾರರಾದ ಜಬಿಹುಲ್ಲಾ ಮುಜಾಹಿದ್ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೇ ಹಕ್ಕಾನಿ ಅವರ ಮರಣವು ಅತ್ಯಂತ ಗಮನಾರ್ಹವಾದುದು. ಇಸ್ಲಾಂ ಧರ್ಮ ರಕ್ಷಣೆಗಾಗಿ ಹಕ್ಕಾನಿ ಜೀವವನ್ನೇ ಮುಡಿಪಾಗಿಟ್ಟಿದ್ದರು. ಅವರೊಬ್ಬ ನಿಜವಾದ ಧಾರ್ಮಿಕ ಯೋಧ ಎಂದು ಬಣ್ಣಿಸಿದ್ದಾರೆ.
ಇದು ಮೂರು ವರ್ಷಗಳ ಹಿಂದೆ ಅಧಿಕಾರಕ್ಕೆ ಮರಳಿದ ನಂತರ ತಾಲಿಬಾನ್ ಹಿರಿಯ ಅಧಿಕಾರಿ ಮೇಲಿನ ಅತ್ಯಂತ ಮಹತ್ವದ ದಾಳಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಖಲೀಲ್ ಹಕ್ಕಾನಿ ನೆಟ್‌ವರ್ಕ್‌ನ ಹಿರಿಯ ನಾಯಕ ಮತ್ತು ಅಫ್ಘಾನಿಸ್ತಾನದಲ್ಲಿ 20 ವರ್ಷಗಳ ಸಂಘರ್ಷದ ಉದ್ದಕ್ಕೂ ಪ್ರಮುಖ ದಾಳಿಗಳನ್ನು ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

