ಕೊಲ್ಕತಾ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತು ಅಮಿತ್ ಷಾ ವಿವಾದಿತ ಹೇಳಿಕೆ ಖಂಡಿಸಿ ಕಾಂಗ್ರೆಸ್ ಹೋರಾಟಕ್ಕಿಳಿದ ಬೆನ್ನಲ್ಲೇ ಪಶಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಈ ಮೂಲಕ ಕಾಂಗ್ರೆಸ್ ಮತ್ತು ಇತರೆ ವಿಪಕ್ಷಗಳು ಬಿಜೆಪಿ ವಿರುದ್ಧ ಅಂಬೆಡ್ಕರ್ ಅಸ್ತ್ರ ಪ್ರಯೋಗ ಮಾಡುತ್ತಿವೆ.
ಅಮಿತ್ ಷಾ ಅವರ ಹೇಳಿಕೆಗಳು ಬಿ.ಆರ್.ಅಂಬೇಡ್ಕರ್ ಅವರ ಮೇಲೆ ಮಾತ್ರವಲ್ಲದೆ ಸಂವಿಧಾನದ ಕರಡು ಸಮಿತಿಯ ಎಲ್ಲ ಸದಸ್ಯರ ಮೇಲೂ ದಾಳಿಯಾಗಿದೆ. ಮುಖವಾಡ ಕಳಚಿದೆ, ಸಂಸತ್ತು ಸಂವಿಧಾನದ 75 ವೈಭವದ ವರ್ಷಗಳ ಬಗ್ಗೆ ಚರ್ಚಿಸುತ್ತಿರುವಾಗ, ಗೃಹ ಸಚಿವ ಅಮಿತ್ ಶಾ ಪ್ರಜಾಪ್ರಭುತ್ವದ ದೇವಾಲಯದಲ್ಲಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ಈ ಸಂದರ್ಭವನ್ನು ಕಳಂಕಗೊಳಿಸಲು ನಿರ್ಧರಿಸಿದ್ದಾರೆ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದೀಗ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಕೂಡ ಧುಮುಕಿದೆ. ಅಮಿತ್ ಷಾ ಅವರ ಹೇಳಿಕೆಗಳು ಬಿ.ಆರ್.ಅಂಬೇಡ್ಕರ್ ಅವರ ಮಾರ್ಗದರ್ಶನ ಮತ್ತು ಸ್ಫೂರ್ತಿಗಾಗಿ ನೋಡುತ್ತಿರುವ ಲಕ್ಷಾಂತರ ಜನರಿಗೆ ಅವಮಾನವಾಗಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಇದು ಬಿಜೆಪಿಯ ಜಾತಿವಾದಿ ಮತ್ತು ದಲಿತ ವಿರೋಧಿ ಮನಸ್ಥಿತಿಯ ಪ್ರದರ್ಶನವಾಗಿದೆ. 240 ಸೀಟುಗಳಿಗೆ ಇಳಿದ ನಂತರ ಅವರು ಈ ರೀತಿ ವರ್ತಿಸಿದರೆ, ಅವರ 400 ಸೀಟುಗಳ ಕನಸು ನನಸಾಗಿದ್ದರೆ ಎಷ್ಟು ನಷ್ಟವಾಗಬಹುದೆಂದು ಊಹಿಸಿ. ಡಾ. ಅಂಬೇಡ್ಕರ್ ಅವರ ಕೊಡುಗೆಯನ್ನು ಸಂಪೂರ್ಣವಾಗಿ ಅಳಿಸಲು ಅವರು ಇತಿಹಾಸವನ್ನು ಪುನಃ ಬರೆಯುತ್ತಾರೆ ಎಂದಿದ್ದಾರೆ.
ಗೃಹ ಸಚಿವ ಅಮಿತ್ ಷಾ ಅವರ ಹೇಳಿಕೆಗಳು ಮಾರ್ಗದರ್ಶನ ಮತ್ತು ಸ್ಫೂರ್ತಿಗಾಗಿ ಬಾಬಾಸಾಹೇಬರನ್ನು ನೋಡುವ ಲಕ್ಷಾಂತರ ಜನರಿಗೆ ಅವಮಾನವಾಗಿದೆ. ಆದರೆ ದ್ವೇಷ ಮತ್ತು ಮತಾಂಧತೆಯನ್ನು ಆಂತರಿಕಗೊಳಿಸಿದ ಪಕ್ಷದಿಂದ ನೀವು ಇನ್ನೇನು ನಿರೀಕ್ಷಿಸಬಹುದು? ಎಂದು ಪ್ರಶ್ನಿಸಿದರು.
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ರಾಜ್ಯಸಭೆಯಲ್ಲಿ ಮಂಗಳವಾರ (ಡಿಸೆಂಬರ್ 17) ಸಂವಿಧಾನದ ಮೇಲಿನ ಚರ್ಚೆಗೆ ಉತ್ತರಿಸುವಾಗ ಸಂವಿಧಾನ ಶಿಲ್ಪಿ ಡಾ.ಭೀಮರಾವ್ ಅಂಬೇಡ್ಕರ್ ಅವರನ್ನು ಕಾಂಗ್ರೆಸ್ ಅವಮಾನಿಸಿದೆ ಎಂದು ಆರೋಪಿಸಿದರು. ಈ ಬಗ್ಗೆ ಇಡೀ ವಿಪಕ್ಷಗಳು ಒಗ್ಗಟ್ಟಾಗಿದ್ದು ಅಮಿತ್ ಷಾ ಅವರು ಅಂಬೇಡ್ಕರ್ ಅವರನ್ನು ಅವಮಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.