ಬೆಳಗಾವಿ: ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಬಗ್ಗೆ ಅವಹೇಳನಕಾರಿ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಎಂಎಲ್‌ಸಿ ಸಿ.ಟಿ.ರವಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಎಫ್‌ಐಆರ್ ದಾಖಲಾದ ಬೆನ್ನಲ್ಲೇ ಸಿ.ಟಿ.ರವಿ ಅವರನ್ನು ಬಂಧಿಸಿದ ಹಿರೇಬಾಗೇವಾಡಿ ಪೊಲೀಸರು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಬಂಧನ ಖಂಡಿಸಿ ಪೊಲೀಸ್ ವ್ಯಾನ್ ಹತ್ತಿ ಬಿಜೆಪಿ ಶಾಸಕರು ಅಸಮಾಧಾನ ಹೊರಹಾಕಿದ ಘಟನೆ ನಡೆಯಿತು.
ಲಕ್ಷ್ಮೀ ಹೆಬ್ಬಾಳ್ಕರ್ ನೀಡಿದ ದೂರಿನ ಮೇರೆಗೆ ಎಫ್‌ಐಆರ್ ದಾಖಲಿಸಿಕೊಂಡಿರುವ ಬೆಳಗಾವಿಯ ಹಿರೇಬಾಗೇವಾಡಿ ಪೊಲೀಸರು, ಸುವರ್ಣಸೌಧದಲ್ಲೇ ಸಿಟಿ ರವಿ ಅವರನ್ನು ಬಂಧಿಸಿದ್ದಾರೆ. ಬಲವಂತಾಗಿಯೇ ಪೊಲೀಸರು ಸುವರ್ಣಸೌಧದಿಂದ ಸಿಟಿ ರವಿ ಅವರನ್ನು ಎತ್ತಿಕೊಂಡು ಬಂದು ವಾಹನದಲ್ಲಿ ಕೂರಿಸಿಕೊಂಡು ಹೋಗಿದ್ದಾರೆ.
ಯಾವ ಸೆಕ್ಷನ್ ದಾಖಲು..?
ಬೆಳಗಾವಿಯ ಹಿರೇಬಾಗೇವಾಡಿ ಠಾಣೆಯಲ್ಲಿ ಬಿಎನ್‌ಎಸ್ ಕಾಯ್ದೆ 75 ಮತ್ತು 79ಅಡಿಯಲ್ಲಿ ಕೇಸ್ ದಾಖಲಾಗಿದ್ದು. ಲೈಂಗಿಕ ಕಿರುಕುಳ, ಮಹಿಳೆ ಇಚ್ಛೆ ವಿರುದ್ಧ ಅಶ್ಲೀಲತೆ ತೋರುವುದು. ಮಹಿಳೆಯ ನಮ್ರತೆ ಅವಮಾನಿಸುವ ಉದ್ದೇಶದಿಂದ ಸನ್ನೆ, ಪದ ಅಥವಾ ಕ್ರಿಯೆ, ಲೈಂಗಿಕ ಬಣ್ಣದ ಟೀಕೆ ಎಂದು ಎಫ್ಐಆರ್ನಲ್ಲಿ ಉಲ್ಲೇಖವಾಗಿದೆ. ಇನ್ನು ಸೆಕ್ಷನ್ 75-ಲೈಂಗಿಕ ಬಣ್ಣದ ಟೀಕೆಗೆ 1 ವರ್ಷದವರೆಗೆ ಸೆರೆವಾಸ ಅಥವಾ ದಂಡ ಹಾಗೂ ಸೆಕ್ಷನ್79 ಪದಪ್ರಯೋಗ ಅಥವಾ ಸಂಜ್ಙೆಗಳ ಮೂಲಕ ಮಹಿಳೆಯ ಗೌರವಕ್ಕೆ ಧಕ್ಕೆಗೆ 3 ವರ್ಷದವರೆಗೆ ಸೆರೆವಾಸ ಮತ್ತು ದಂಡ ವಿಧಿಸಬಹುದು.
ಹಲ್ಲೆಗೆ ಯತ್ನಿಸಿ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರ ಗೂಂಡಾಗಿರಿ :
ಸಚಿವ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪ ತೀವ್ರ ಸ್ವರೂಪ ಪಡೆದುಕೊಂಡಿದೆ. ಬೆಳಗಾವಿಯ ಸುವರ್ಣ ಸೌಧದ ಮೊಗಸಾಲೆಯಲ್ಲಿ ದೊಡ್ಡ ಹೈಡ್ರಾಮಾವೇ ನಡೆದಿದೆ. ವಿಧಾನಪರಿಷತ್ನ ಕಾರಿಡಾರ್ನಲ್ಲಿ ಹೋಗುತ್ತಿರುವಾಗ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಗಲಿಗರು ಏಕಾಏಕಿ ಸಿಟಿ ರವಿಗೆ ಅಡ್ಡ ಹಾಕಿ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದಾರೆ. ಅಲ್ಲದೇ ನೂರಾರು ಬೆಂಬಲಿಗರು ಘೋಷಣೆ ಕೂಗಿ ಸಿಟಿ ರವಿ ಮೇಲೆ ಮುಗಿಬಿದ್ದಿದ್ದು, ಹಲ್ಲೆಗೆ ಯತ್ನ ನಡೆದಿದೆ ಎಂದು ತಿಳಿದುಬಂದಿದೆ. ಕೂಡಲೇ ಮಾರ್ಷಲ್ಗಳು, ಕಾರಿಡಾರ್ ಗೇಟ್ ಬಂದ್ ಮಾಡಿದರು. ಹೀಗಾಗಿ ಸಿಟಿ ರವಿ ಅಪಾಯದಿಂದ ಪಾರಾಗಿದ್ದಾರೆ.
ಏಕವಚನದಲ್ಲೇ ಏನೋ ಸೂ….ಮಗನೇ…. ನಮ್ಮಕ್ಕನಿಗೆ ಹೀಗಂದ್ಯಾ ಎಂದು ಓರ್ವ ವ್ಯಕ್ತಿ ಒದೆಯುವ ರೀತಿಯಲ್ಲಿ ಕಾಲೆತ್ತಿದ್ದಾನೆ. ಆಗ ಏನೋ ಎಂದ ರವಿ ಪ್ರಶ್ನಿಸಿದ್ದಾರೆ. ಆಗ ಸಿಟಿ ರವಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಏಯ್, ಆಚೆ ಬಾರೋ, ಧೈರ್ಯವಿದ್ದರೆ ಹೊರಗೆ ಬಾ ಎಂದು ಏಕವಚನದಲ್ಲೇ ಆವಾಜ್ ಹಾಕಿದ್ದಾರೆ. ಈ ವೇಳೆ ಒಂದಿಬ್ಬರು ಹಲ್ಲೆಗೂ ಯತ್ನಿಸಿದ ಪ್ರಸಂಗ ನಡೆಯಿತು. ಇದರಿಂದ ಹೆಬ್ಬಾಳ್ಕರ್ ಬೆಂಬಲಿಗರ ವಿರುದ್ಧ ಕೆಂಡಾಮಂಡಲರಾದ ಸಿ.ಟಿ ರವಿ ʻಬಾ.. ಬಾ.. ಹೊಡಿ ಬಾ.., ಅದೇನ್ ಮಾಡ್ತಾರೆ ಮಾಡ್ಲಿ ಬಿಡ್ರಿ ಎಂದಿದ್ದಾರೆ.
ಇದರಿಂದ ದೊಡ್ಡ ಗಲಾಟೆ ಉಂಟಾಗಿದ್ದು, ಕೂಡಲೇ ಪೊಲೀಸರು ದೌಡಾಯಿಸಿ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರನ್ನು ಚದುರಿಸಿದರು. ಅಲ್ಲದೇ ಕೆಲವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನು ಈ ಗಲಾಟೆ ನಡೆಯುವ ಸ್ಥಳದಲ್ಲೇ ಹೆಬ್ಬಾಳ್ಕರ್ ಸಹೋದರ ವಿಧಾನಪರಿಷತ್ ಸದಸ್ಯ ಚನ್ನರಾಜ್ ಹಟ್ಟಿಹೊಳಿ ಕಾಣಿಸಿಕೊಂಡಿದ್ದಾರೆ.
ಲಕ್ಷ್ಮೀ ಹೆಬ್ಬಾಳ್ಕರ್ ಅವರ ಬೆಂಬಲಿಗರ ನಡೆಯಿಂದ ಆಕ್ರೋಶಗೊಂಡಿರುವ ಸಿಟಿ ರವಿ, ನನ್ನ ಮೇಲೆ ಅಟ್ಯಾಕ್ ಮಾಡಲು ಯತ್ನಿಸಿದ್ದಾರೆ. ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರು ಕೊಲೆ ಬೆದರಿಕೆ ಹಾಕಿದ್ದಾರೆ. ಕೂಡಲೇ ಅವರನ್ನು ಬಂಧಿಸಬೇಕೆಂದು ಧರಣಿ ಕುಳಿತುಕೊಂಡಿದ್ದಾರೆ.
15 ಜನ ಅರೆಸ್ಟ್ :
ಪೊಲೀಸರು ಸಿ.ಟಿ. ರವಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ ಸುಮಾರು 15 ಜನರನ್ನು ಬಂಧಿಸಿದ್ದಾರೆ. ಸುವರ್ಣ ಸೌಧದ ಬಳಿ ಎಂಎಲ್ಸಿ ಸೀಟಿ ರವಿಗೆ ಮುತ್ತಿಗೆ ಹಾಕಲು ಹೆಬ್ಬಾಳ್ಕರ್ ಬೆಂಬಲಿಗರು ಮುತ್ತಿಗೆ ಹಾಕಿದರು.ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಮುತ್ತಿಗೆ ಹಾಕಲು ಯತ್ನಿಸಿದರು ಈ ವೇಳೆ ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರನ್ನು ಪೊಲೀಸರು ವಶಕ್ಕೆ ಪಡೆದುಕೊಂಡರು.

