ನ್ಯೂಯಾರ್ಕ್: ಲಾಸ್ ವೇಗಾಸ್‌ನಲ್ಲಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಸೇರಿದ ಹೋಟೆಲ್‌ನ ಹೊರಗೆ ಟೆಸ್ಲಾ ಸೈಬರ್‌ಟ್ರಕ್ ಸ್ಫೋಟಗೊಂಡು ಓರ್ವ ಸಾವನ್ನಪ್ಪಿ ಏಳು ಮಂದಿ ಗಾಯಗೊಂಡಿರುವ ಘಟನೆ ವರದಿಯಾಗಿದೆ.
ಲಾಸ್ ವೇಗಾಸ್ ಶೆರಿಫ್ ಕೆವಿನ್ ಮೆಕ್‌ಮಹಿಲ್ ಸುದ್ದಿ ಸಂಸ್ಥೆ ಎಎಫ್‌ಪಿ ಪ್ರಕಾರ, ಟೆಸ್ಲಾ ಸೈಬರ್ ಟ್ರಕ್ ಸ್ಫೋಟಕ್ಕೂ ಮೊದಲು ಟ್ರಂಪ್ ಅವರ ಇಂಟರ್ನ್ಯಾಷನಲ್ ಹೋಟೆಲ್ ಗೇಟ್ ಬಳಿ ಬಂದಿದೆ. ಹೋಟೆಲ್ ಗೇಟ್ ಮುಂದೆಯೇ ಸೈಬರ್ ಟ್ರಕ್ ನಿಲ್ಲಿಸಲಾಗಿತ್ತು. ಈ ಟ್ರಕ್‌ಗೆ ಮೊದಲು ಬೆಂಕಿ ಹೊತ್ತಿಕೊಂಡು ನಂತರ ಸ್ಫೋಟ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಹೋಟೆಲ್ ಪ್ರವೇಶದ್ವಾರದಲ್ಲಿ ನಿಲ್ಲಿಸಿದ ಸ್ಟೇನ್‌ಲೆಸ್ ಸ್ಟೀಲ್ ಟ್ರಕ್‌ಗೆ ಬೆಂಕಿ ಹೊತ್ತಿ ಉರಿಯುವ ದೃಶ್ಯ ವೀಡಿಯೋದಲ್ಲಿ ಸೆರೆಯಾಗಿದೆ. ಮೊದಲು ಬೆಂಕಿ ಹೊತ್ತಿಕೊಂಡು ನಂತರ ಸ್ಫೋಟ ಸಂಭವಿಸಿದೆ.
ಸೈಬರ್‌ಟ್ರಕ್‌ನೊಳಗಿದ್ದ ಮ್ಯಾಕ್‌ಮಹಿಲ್ ಹೆಸರಿನ ವ್ಯಕ್ತಿ ಮೃತಪಟ್ಟಿದ್ದಾನೆ. ಇನ್ನೂ 7 ಜನರಿಗೆ ಸಣ್ಣಪುಟ್ಟ ಗಾಯಗಳಾಗಿವೆ. . ಈ ಸ್ಫೋಟವು ಭಯೋತ್ಪಾದಕ ಕೃತ್ಯವೇ ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಶನ್ (ಎಫ್‌ಬಿಐ) ತಿಳಿಸಿದೆ.
ಮಸ್ಕ್ ಸ್ಪಷ್ಟನೆ :
ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್, ದೊಡ್ಡ ಪಟಾಕಿಗಳನ್ನು ಟ್ರಕ್‌ನಲ್ಲಿ ಸಾಗಿಸುವಾಗ ಸ್ಫೋಟ ಸಂಭವಿಸಿದೆ. ಟ್ರಕ್‌ನಿಂದ ಉಂಟಾದ ಸಮಸ್ಯೆ ಇದಲ್ಲ ಎಂದು ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಸ್ಪಷ್ಟಪಡಿಸಿದ್ದಾರೆ. ವಾಹನದ ಹಿಂಭಾಗದಲ್ಲಿ ತುಂಬಿದ್ದ ಪಟಾಕಿ ಬಾಕ್ಸ್‌ಗಳು ಮತ್ತು ಇಂಧನ ಡಬ್ಬಿಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಜೋ ಬಿಡೆನ್ ಪ್ರತಿಕ್ರಿಯೆ :
ನ್ಯೂ ಓರ್ಲಿಯನ್ಸ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಜನಸಂದಣಿಯ ಮೇಲೆ ವ್ಯಕ್ತಿಯೊಬ್ಬ ಟ್ರಕ್ ಅನ್ನು ಚಲಾಯಿಸಿ, ಗುಂಡು ಹಾರಿಸಿ 15 ಜನರನ್ನು ಕೊಂದ ಕೆಲವೇ ಗಂಟೆಗಳ ನಂತರ ಈ ಘಟನೆ ಸಂಭವಿಸಿದೆ, ಇದನ್ನು ಕೂಡ ಭಯೋತ್ಪಾದಕ ಕೃತ್ಯ ಎಂದು ಶಂಕಿಸಲಾಗಿದ್ದು, ಎರಡು ಘಟನೆಗಳ ನಡುವಿನ ಯಾವುದೇ ಸಂಭವನೀಯ ಸಂಪರ್ಕವನ್ನು ಎಫ್‌ಬಿಐ ತನಿಖೆ ನಡೆಸುತ್ತಿದೆ ಎಂದು ಯುಎಸ್ ಅಧ್ಯಕ್ಷ ಜೋ ಬಿಡೆನ್ ಹೇಳಿದ್ದಾರೆ.

