ನವದೆಹಲಿ: ಕಳೆದ ವಾರ ಪೊಂಚ್ ಬಳಿ ಸೇನಾ ವಾಹನ ಕಮರಿಗೆ ಬಿದ್ದು ಕರ್ನಾಟಕದ ನಾಲ್ವರು ಸೇರಿದಂತೆ ಒಟ್ಟು ಐವರು ಹುತಾತ್ಮರಾಗಿದ್ದರು. ಈ ಘಟನೆ ಮಾಸುವ ಮುನ್ನವೇ ಜಮ್ಮು ಮತ್ತು ಕಾಶ್ಮೀರದ ಬಂಡಿಪೋರಾ ಜಿಲ್ಲೆಯ ವುಲಾರ್ ವ್ಯೂಪಾಯಿಂಟ್ ಬಳಿ ಶನಿವಾರ ಮತ್ತೊಂದು ಸೇನಾ ವಾಹನವು ರಸ್ತೆಯಿಂದ ಜಾರಿ ಆಳವಾದ ಕಮರಿಗೆ ಬಿದ್ದ ಪರಿಣಾಮ ಕನಿಷ್ಠ ಮೂವರು ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು ಇತರ ಮೂವರು ಗಾಯಗೊಂಡಿದ್ದಾರೆ ಎಂದು ವರದಿ ತಿಳಿಸಿದೆ.
ಸೇನಾ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಟ್ರಕ್ ಕೆಟ್ಟ ಹವಮಾನದ ಕಾರಣದಿಂದ ಉಂಟಾದ ಅಸ್ಪಷ್ಟ ಗೊಚರತೆಯಿಂದ ವಾಹನವು ರಸ್ತೆಯಿಂದ ಸ್ಕಿಡ್ ಆಗಿ ಈ ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ನಂತರ ಗಾಯಗೊಂಡ ಸೈನಿಕರನ್ನು ಸ್ಥಳೀಯ ಬಂಡಿಪೋರಾ ಜಿಲ್ಲಾ ಆಸ್ಪತ್ರೆಗೆ ಸೇರಿಸಲಾಗಿದೆ.
ಭಾರತೀಯ ಸೇನೆಯ ಚಿನಾರ್ ಕಾರ್ಪ್ಸ್ ಎಕ್ಸ್ ಹ್ಯಾಂಡಲ್ನಲ್ಲಿ ಫೋಸ್ಟ್ ಮಾಡಿದಂತೆ “ಕೆಟ್ಟ ಹವಮಾನದ ಕಾರಣದಿಂದ ವಾಹನವು ಸ್ಕಿಡ್ ಆಗಿ ಪಾತಳಕ್ಕೆ ಬಿದ್ದಿದೆ. ಈ ಸಂದರ್ಭದಲ್ಲಿ ಕಾಶ್ಮೀರದ ಸ್ಥಳೀಯರ ಸಹಾಯದಿಂದ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ದುರದೃಷ್ಟಕರ ಅಪಘಾತದಲ್ಲಿ ಮೂವರು ಧೈರ್ಯಶಾಲಿಗಳು ತಮ್ಮ ಪ್ರಾಣವನ್ನು ಕಳೆದುಕೊಂಡರು. ಭಾರತೀಯ ಸೇನೆಯು ದುಃಖತಪ್ತ ಕುಟುಂಬಗಳಿಗೆ ಹೃತ್ಪೂರ್ವಕ ಸಂತಾಪವನ್ನು ವ್ಯಕ್ತಪಡಿಸುತ್ತದೆ ಎಂದು ತಿಳಿಸಿದೆ.
ಇದಕ್ಕೂ ಮುನ್ನ ಡಿಸೆಂಬರ್ 24, 2024 ರಂದು, ಪೂಂಚ್ ಜಿಲ್ಲೆಯಲ್ಲಿ ಸೇನಾ ವಾಹನವು 150 ಅಡಿ ಆಳಕ್ಕೆ ಉರುಳಿದ ನಂತರ ಐವರು ಸೈನಿಕರು ಸಾವನ್ನಪ್ಪಿ, ಐವರು ಗಾಯಗೊಂಡಿದ್ದರು.

