ಮೈಸೂರು: ನಾನು ಬಿಜೆಪಿಯನ್ನು ಪ್ರೀತಿಸಿ ಬರಲಿಲ್ಲ. ಕಾಂಗ್ರೆಸ್ ಮೇಲಿನ ಕೋಪಕ್ಕೆ ಬಂದೆ. ಆದರೆ, ಇಲ್ಲಿಗೆ ಬಂದ ನಂತರ ನನ್ನ ಯೋಗ್ಯತೆ ಗುರುತಿಸಿ ಪದವಿ ಕೊಟ್ಟಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು.
ನಗರದ ಕುರಿಮಂಡಿ ಸಮೀಪದ ಕಲ್ಪವೃಕ್ಷ ನಗರದ ಸಿದ್ದಪ್ಪಾಜಿ ದೇವಸ್ಥಾನ ಆವರಣದಲ್ಲಿ ಬಿಜೆಪಿ ನಗರ ಎಸ್.ಸಿ.ಮೋರ್ಚಾ ವತಿಯಿಂದ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಕಾಂಗ್ರೆಸ್ ನನಗೆ ಏಳು ಬಾರಿ ಟಿಕೆಟ್ ತಪ್ಪಿಸಿತು. ನಾನು ನಿಮ್ಮ ಹಾಗೆ ಬಿಜೆಪಿ ಬ್ರಾಹ್ಮಣರ ಪಕ್ಷ, ನಮ್ಮನ್ನು ಗರ್ಭಗುಡಿಗೆ ಬಿಡಲ್ಲ ಅಂತ ಬೈದಿದ್ದೆ ಆದರೆ ಬಿಜೆಪಿಯವರು ನನ್ನ ಯೋಗ್ಯತೆ ಗುರುತಿಸಿ ಪದವಿ ಕೊಟ್ಟಿದ್ದಾರೆ ಎಂದರು.
ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿದ್ದು ನಾನು ಮಾಡಿದ ಮೊದಲ ತಪ್ಪು ಎಂದು ಅರಿವಾಗಿದ್ದು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ಪುಸ್ತಕಗಳನ್ನು ಓದಿದ ನಂತರ. ಕಾಂಗ್ರೆಸ್ ಪಕ್ಷ ದಲಿತರನ್ನು ಪ್ರೀತಿಸುವಂತೆ ನಟಿಸುತ್ತಿದೆ. ಆದರೆ, ವಾಸ್ತವದಲ್ಲಿ ಅವರಿಗೆ ದಲಿತರ ಬಗ್ಗೆ ಕಾಳಜಿ ಇಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಕುಟುಂಬದವರು ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ಅವರ ಪುತ್ರ ಸುನಿಲ್‌ಬೋಸ್ ಸಂಸದರಾಗಿದ್ದಾರೆ. ಅವರು ಎದ್ದೇಳುವುದೇ ಮಧ್ಯಾಹ್ನವಾದರೆ ಜನರ ಕೆಲಸ ಮಾಡುವುದು ಯಾವಾಗ? ದಲಿತರು ದಲಿತರನ್ನು ತುಳಿಯುವ ಮಾಫಿಯಾ ಕಾಂಗ್ರೆಸ್ ಪಕ್ಷದಲ್ಲಿದೆ ಎಂದು ಆರೋಪಿಸಿದರು.

