ಚಿಕ್ಕಬಳ್ಳಾಪುರ: ಜಿಲ್ಲೆಯ ಮಾಚಹಳ್ಳಿ ಕೆರೆ ಬಳಿ ಭಾನುವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಯುವ ಪತ್ರಕರ್ತ ಜಿ. ಎಸ್. ಭರತ್ (34) ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಗುಡಿಬಂಡೆಯಿಂದ ಬಾಗೇಪಲ್ಲಿ ಕಡೆಗೆ ತೆರಳುತ್ತಿದ್ದ ವೇಳೆ ಕಾರು ನಿಯಂತ್ರಣ ತಪ್ಪಿ ಮಾಚಹಳ್ಳಿ ಕೆರೆ ಕಟ್ಟೆಗೆ ಡಿಕ್ಕಿ ಹೊಡೆದು ಅವಘಡ ಸಂಭವಿಸಿದೆ. ಘಟನೆ ವೇಳೆ ಕಾರಿನ ಏರ್ ಬ್ಯಾಗ್ ಓಪನ್ ಆದರೂ ಕೂಡ ಚಾಲಕನ ಜೀವ ಉಳಿದಿಲ್ಲ.
ಬೆಂಗಳೂರಿನಲ್ಲಿ ಖಾಸಗಿ ಪತ್ರಿಕೆಯಲ್ಲಿ ವಿಶೇಷ ವರದಿಗಾರನಾಗಿ ಭರತ್ ಕೆಲಸ ಮಾಡುತ್ತಿದ್ದ. ಬೆಂಗಳೂರಿನಲ್ಲೇ ವಾಸವಿದ್ದ ಭರತ್, ವಾರಾಂತ್ಯದ ಹಿನ್ನೆಲೆ ಸ್ವಗ್ರಾಮ ಗುಡಿಬಂಡೆಗೆ ಆಗಮಿಸಿದ್ದ. ತಡರಾತ್ರಿ ಬಾಗೇಪಲ್ಲಿಗೆ ತೆರಳುವಾಗ ಅಫಘಾತ ಸಂಭವಿಸಿದೆ.
ಇತ್ತೀಚೆಗೆ ಬೆಳಗಾವಿ ಅಧಿವೇಶನದಲ್ಲಿ ಹಲವು ವರದಿಗಳ ಮೂಲಕ ಕ್ರಿಯಾಶೀಲ ಪತ್ರಕರ್ತ ಎಂದು ಹೆಸರು ಮಾಡಿದ್ದರು. ಕಳೆದ ದಿನವಷ್ಟೇ ಅನ್ನಭಾಗ್ಯ ಯೋಜನೆ ಬಗ್ಗೆ ಪತ್ರಿಕೆಯಲ್ಲಿ ವಿಶೇಷ ವರದಿ ಮಾಡಿ ಗಮನ ಸೆಳೆದಿದ್ದರು.

