ನಂಜನಗೂಡು : ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯೊಬ್ಬರು ವಾಂತಿ ಮಾಡಲು ಕಿಟಕಿಯಿಂದ ತಲೆ ಹೊರ ಹಾಕಿದ್ದು, ಎದುರಿಗೆ ಬಂದ ಲಾರಿಯೊಂದು ತಲೆಯನ್ನೇ ಜಜ್ಜಿಕೊಂಡು ಹೋಗಿರುವ ಘಟನೆ ಮೈಸೂರು-ಊಟಿ ರಸ್ತೆಯ ನಂಜನಗೂಡಿನ ಮುದ್ದಹಳ್ಳಿ ಬಳಿ ನಡೆದಿದೆ.
ನಡೆದದ್ದೇನು..?
ಶನಿವಾರ ಮಧ್ಯಾಹ್ನ ಮೈಸೂರಿನಿಂದ ಗುಂಡ್ಲುಪೇಟೆಗೆ ನಂಜನಗೂಡು ಮಾರ್ಗವಾಗಿ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್‌ನಲ್ಲಿದ್ದ ಶಿವಲಿಂಗಮ್ಮ ವಾಂತಿ ಮಾಡಲು ದಾರಿ ಮಧ್ಯೆ ತಲೆ ಹೊರಹಾಕಿದ್ದರು. ಇದೇ ವೇಳೆ ಪಕ್ಕದಲ್ಲೇ ಹಾದು ಹೋದ ಐಷರ್ ಗೂಡ್ಸ್ ವಾಹನ ಮಹಿಳೆಯ ತಲೆಗೆ ಡಿಕ್ಕಿ ಹೊಡೆದು ಹೋಗಿದೆ. ವೇಗ ಇದ್ದ ಕಾರಣ ಮಹಿಳೆಯ ತಲೆ ಛಿದ್ರವಾಗಿದ್ದು, ಬಸ್ ಕಿಟಕಿಯಿಂದ ಧಾರಾಕಾರವಾಗಿ ರಕ್ತದ ಕೋಡಿ ಹರದಿದೆ. ಕೈ ಕೂಡ ಜಜ್ಜಿ ಹೋಗಿದೆ. ಭೀಕರ ಅಪಘಾತ ಮತ್ತು ಮಹಿಳೆಯ ದಾರುಣ ಸಾವು ಕಂಡು ಅಲ್ಲಿದ್ದವರೆಲ್ಲ ಆಘಾತಕ್ಕೆ ಒಳಗಾಗಿದ್ದರು.
ಕೆಎಸ್‌ಆರ್‌ಟಿಸಿ ಚಾಲಕ ಕೂಡಲೇ ಬಸ್ ನಿಲ್ಲಿಸಿದ್ದ. ಆದರೆ ಅಪಘಾತ ಎಸಗಿದ ಐಷರ್ ಟ್ರಕ್ ನಿಂತಿಲ್ಲ. ಲಾರಿ ಸಮೇತ ಚಾಲಕ ಪರಾರಿಯಾಗಿದ್ದಾನೆ. ನಂಜನಗೂಡು ಸಂಚಾರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದ್ದು, ಪಿಎಸ್ಐ ಸಿದ್ದರಾಜು ಮತ್ತು ಸಿಬ್ಬಂದಿ ಮಹೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಸ್ಥಳ ಮಹಜರು ನಡೆಸಿದ ಪೊಲೀಸರು, ಮಹಿಳೆಯ ಶವವನ್ನು ಸರ್ಕಾರಿ ಆಸ್ಪತ್ರೆಗೆ ಪೋಸ್ಟ್‌ಮಾರ್ಟಂಗಾಗಿ ಕಳುಹಿಸಿದ್ದಾರೆ. ಅಪಘಾತ ಎಸಗಿ ಪರಾರಿಯಾಗಿರುವ ಐಷರ್ ಟ್ರಕ್‌ಗಾಗಿ ಪೊಲೀಸರು ಶೋಧ ನಡೆಸಿದ್ದಾರೆ. ಘಟನೆ ಸಂಬಂಧ ದೂರು ದಾಖಲಿಸಿಕೊಂಡ ಪೊಲೀಸರು ಲಾರಿ ಮತ್ತೆ ಹಚ್ಚುವ ಕಾರ್ಯ ನಡೆಸಿದ್ದು, ತನಿಖೆ ಮುಂದುವರೆಸಿದ್ದಾರೆ.

