ಚಂದನವನದ ಅಗ್ರಗಣ್ಯ ಶ್ರೇಷ್ಠ ನಟ ಡಾ. ರಾಜಕುಮಾರ್ ಎಂದೆಂದಿಗೂ ಅಜರಾಮರ.ಅಭಿಮಾನಿಗಳನ್ನು ಅಗಲಿ 19 ವರ್ಷಗಳೆ ಕಳೆದಿದ್ರು ಇಂದಿಗೂ ಡಾಕ್ಟರ್ ರಾಜಕುಮಾರ್ ನೆನಪು ಮಾಸಿಲ್ಲ. ಇವತ್ತು ವರನಟ ರಾಜಕುಮಾರ ಅವರ 97ನೇ ಜನ್ಮದಿನವಾಗಿದ್ದು ದೇಶದಲ್ಲಿ ಅಭಿಮಾನಿಗಳು ಸಂಭ್ರಮದಿಂದ ಆಚರಿಸುತ್ತಿದ್ದಾರೆ..
ಇಂದು ದಿವಂಗತ ಮೇರುನಟ ಡಾ. ರಾಜ್‌ಕುಮಾರ್ ಜಯಂತಿ. ಏಪ್ರಿಲ್ 24, 1929ರಂದು ರಾಜ್ಕುಮಾರ್ ಅವರು ಜನಿಸಿದರು. ರಾಜ್‌ಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ಇಂದು ಗಂಧದ ಗುಡಿ ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ.
ರಾಜಕುಮಾರ್ ಅವರ 150ನೇ ಸಿನಿಮಾವೇ ಗಂಧದ ಗುಡಿ. ಮಾಸ್ತಿಗುಡಿ ಅರಣ್ಯದಲ್ಲಿ ದಸರಾ ಆನೆಗಳ ನಡುವೆ ಗಂಧದ ಗುಡಿ ರೂಪುಗೊಂಡಿತು. 1973ರ ಸೆಪ್ಟಂಬರ್ 14ರಂದು ಗಂಧದ ಗುಡಿ ಸಿನಿಮಾ ಬಿಡುಗಡೆ ಆಗಿತ್ತು. ಅಷ್ಟೇ ಅಲ್ಲದೇ ಯಶಸ್ವಿಯಾಗಿ 25 ವಾರಗಳ ಪ್ರದರ್ಶನ ಕಂಡು ಬ್ಲಾಕ್ ಬಾಸ್ಟರ್ ಆಗಿತ್ತು. ಪ್ರೇಕ್ಷಕರು ಗಂಧದ ಗುಡಿ ಚಿತ್ರವನ್ನು ಇಷ್ಟಪಟ್ಟಿದ್ದರಿಂದ ಹದಿಮೂರೇ ವರ್ಷದಲ್ಲಿ 1986ರಲ್ಲಿ ಮರು ಬಿಡುಗಡೆ ಕಂಡು ದಾಖಲೆ ಮಾಡಿತ್ತು.
ದೊಡ್ಮನೆಯಿಂದ ಸಿನಿಮಾ ಇಂಡಸ್ಟ್ರಿ ಕಾಲಿಟ್ಟ ಮಹಿಳಾ ನಿರ್ಮಾಪಕರು ಇಲ್ಲಿ ತನಕ ದೊಡ್ಡ ಗೆಲುವು ಸಾಧಿಸಿದ್ದಾರೆ. ಇದೀಗ ಪಾರ್ವತಮ್ಮ ರಾಜ್‌ಕುಮಾರ್, ಗೀತಾ ಶಿವ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್‍ಕುಮಾರ್ ಪಟ್ಟಿಗೀಗ ಶಿವಣ್ಣನ ಪುತ್ರಿ ನಿವೇದಿತಾ ಸೇರ್ಪಡೆ ಆಗಿದ್ದಾರೆ. ಇಲ್ಲಿ ತನಕ ವೆಬ್ ಸೀರಿಸ್, ಧಾರಾವಾಹಿ ನಿರ್ಮಾಣ ಮಾಡಿದ್ದ ನಿವೇದಿತಾ, ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ನಿವೇದಿತಾ ನಿರ್ಮಾಣದ ಫೈರ್ ಫ್ಲೈ ಸಿನಿಮಾ ಇಂದು ರಾಜ್ಯಾದ್ಯಂತ ಬಿಡುಗಡೆ ಆಗ್ತಿದೆ. ಈಗಾಗಲೇ ಸೆಲೆಬ್ರಿಟಿ ಪ್ರೀಮಿಯರ್ ಶೋ ನಡೆದಿದ್ದು, ಎಲ್ಲರಿಂದಲೂ ಉತ್ತಮವಾದ ಪ್ರತಿಕ್ರಿಯೆ ದೊರೆತಿದೆ.