ಕನ್ನಡ ಮಾತಾಡೋ ಹಾಗಿದ್ರೆ ಮಾತ್ರ ಅಂಗಡಿಗೆ ಬಾ
ಪರಭಾಷಿಕನಿಗೆ ಖಡಕ್ ವಾರ್ನಿಂಗ್ ಕೊಟ್ಟ ಮಹಿಳೆ
ಟೀ ಸ್ಟಾಲ್ ನಡೆಸುತ್ತಿರುವ ಮಹಿಳೆಯಿಂದ ಖಡಕ್ ವಾರ್ನಿಂಗ್
ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಕತ್ ವೈರಲ್
ಈಗಿನ ಕಾಲದಲ್ಲಿ ಇಂಗ್ಲೀಷ್ ನಲ್ಲಿ ಮಾತಾಡಿದರೆ ಗೌರವ ಹೆಚ್ಚು ಎನ್ನುವ ಭಾವನೆ ಅನೇಕರಲ್ಲಿದೆ. ಹೀಗಾಗಿ ಕನ್ನಡ ಮಾತನಾಡಲು ಗೊತ್ತಿದ್ದರೂ ಕೂಡ ಇಂಗ್ಲೀಷ್ ನಲ್ಲಿ ವ್ಯವಹರಿಸುವವರೇ ಹೆಚ್ಚು. ಆದರೆ ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸಣ್ಣ ಟೀ ಸ್ಟಾಲ್ ನಡೆಸುತ್ತಿರುವ ಮಹಿಳೆಯೊಬ್ಬರು ವ್ಯಕ್ತಿಯೊಬ್ಬನಿಗೆ ಕನ್ನಡ ಮಾತನಾಡು ಎಂದು ಖಡಕ್ ಆಗಿ ಹೇಳಿದ್ದಾರೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈ ಮಹಿಳೆಯ ಕನ್ನಡ ಉಳಿಸಬೇಕು ಬೆಳೆಸಬೇಕು ಎನ್ನುವ ಭಾವನೆಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಈ ವಿಡಿಯೋದಲ್ಲಿ ಮಹಿಳೆಯೊಬ್ಬರು ಸಣ್ಣ ಟೀ ಸ್ಟಾಲ್ ನಡೆಸುತ್ತಿರುವುದನ್ನು ನೋಡಬಹುದು.
ಈ ಸ್ಟಾಲ್ ಗೆ ವ್ಯಕ್ತಿಯೊಬ್ಬನು ಬಂದಿದ್ದಾನೆ. ಪರಭಾಷಾ ವ್ಯಕ್ತಿಯೂ ಕನ್ನಡ ಮಾತನಾಡದೇ ತನ್ನದೇ ಭಾಷೆಯಲ್ಲೇ ಏನನ್ನೋ ಕೇಳಿದ್ದಾನೆ. ಇದರಿಂದ ಕೋಪಗೊಂಡ ಮಹಿಳೆ, ʼಏಯ್.. ಕನ್ನಡದಲ್ಲಿ ಕೇಳು. ಕನ್ನಡ ಮಾತಾಡೋ ಹಾಗಿದ್ರೆ ಅಂಗಡಿ ಹತ್ರ ಬಾ.. ಇಲ್ಲ ಬರಬೇಡʼ ಎಂದು ಖಡಕ್ ಆಗಿ ಹೇಳಿರುವುದನ್ನು ನೋಡಬಹುದು.
ಅಷ್ಟೇ ಅಲ್ಲದೇ ನಾಳೆಯಿಂದ ಕನ್ನಡ ಮಾತನಾಡಿದ್ರೆ ಮಾತ್ರ ಐಟಂ ಇಲ್ಲದಿದ್ರೆ ಇಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದಾಳೆ. ಈ ವಿಡಿಯೋವನ್ನು ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯುತ್ತಿದ್ದ ವ್ಯಕ್ತಿಯ ಜೊತೆಗೂ ಮಾತನಾಡಿದ್ದು, ಎಲ್ಲರಿಗೂ ನಾನು ನಿನ್ನೆಯಿಂದ ಅದನ್ನೇ ಹೇಳ್ತಾ ಇರೋದು ಸರ್, ಕನ್ನಡ ಮಾತಾನಾಡಡಿದ್ರೆ ಐಟಂ ಕೊಡುವುದೇ ಇಲ್ಲ ಎಂದಿದ್ದಾರೆ.ಈ ವಿಡಿಯೋವೊಂದು ಹದಿನೈದು ಸಾವಿರಕ್ಕೂ ಅಧಿಕ ವೀಕ್ಷಣೆ ಕಂಡಿದ್ದು ನೆಟ್ಟಿಗರು ಕನ್ನಡ ಉಳಿಯಬೇಕು ಎನ್ನುವ ಈ ಮಹಿಳೆಯ ಕಾಳಜಿಗೆ ಮೆಚ್ಚಿಕೊಂಡಿದ್ದಾರೆ.

