ಇಸ್ಲಾಮಾಬಾದ್: ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಅಧ್ಯಕ್ಷ ಬಿಲಾವಲ್ ಭುಟ್ಟೋ-ಜರ್ದಾರಿ ಮಂಗಳವಾರ ಪಾಕಿಸ್ತಾನ ಭಾರತದೊಂದಿಗೆ ಶಾಂತಿಗೆ ಮುಕ್ತವಾಗಿದೆ ಎಂದು ಹೇಳಿದ್ದಾರೆ, ಕೆಲವು ದಿನಗಳ ಹಿಂದೆ ಸಿಂಧೂ ಜಲ ಒಪ್ಪಂದವನ್ನು ಸ್ಥಗಿತಗೊಳಿಸಿದರೆ ರಕ್ತಪಾತವಾಗುತ್ತದೆ ಎಂದು ಬೆದರಿಕೆ ಹಾಕಿದ್ದ ಇವರು ಈಗ ಶಾಂತಿ ಪಠಿಸುತ್ತಿದ್ದಾರೆ.
ಮಂಗಳವಾರ ಪಾಕಿಸ್ತಾನದ ರಾಷ್ಟ್ರೀಯ ಸಭೆಯಲ್ಲಿ ಮಾತನಾಡಿದ ಅವರು, “ಭಾರತ ಶಾಂತಿಯ ಹಾದಿಯಲ್ಲಿ ನಡೆಯಲು ಬಯಸಿದರೆ, ಅವರು ಮುಷ್ಟಿ ಬಿಗಿಯದೆ ತೆರೆದ ಕೈಗಳೊಂದಿಗೆ ಬರಲಿ. ಅವರು ಸತ್ಯಗಳೊಂದಿಗೆ ಬರಲಿ ಮತ್ತು ಕಟ್ಟುಕಥೆಗಳೊಂದಿಗೆ ಅಲ್ಲ. ನಾವು ನೆರೆಹೊರೆಯವರಾಗಿ ಕುಳಿತು ಸತ್ಯವನ್ನು ಮಾತನಾಡೋಣ” ಎಂದಿದ್ದಾರೆ.
ಏಪ್ರಿಲ್ 25 ರಂದು ಜರ್ದಾರಿ ಅವರು ಸಿಂಧೂ ನದಿಯ ಮೇಲೆ ಪ್ರಧಾನಿ ನರೇಂದ್ರ ಮೋದಿ ಅವರ “ಆಕ್ರಮಣ”ಕ್ಕೆ ಪಾಕಿಸ್ತಾನಿಗಳು ಒಗ್ಗಟ್ಟಿನಿಂದ ನಿಂತು ಪ್ರತಿಕ್ರಿಯಿಸುತ್ತಾರೆ ಎಂದು ಹೇಳಿದ ನಂತರ ಶಾಂತಿಯ ಕುರಿತು ಈ ಹೇಳಿಕೆಗಳು ಬಂದಿವೆ.

