ಮಂಗಳೂರು : ಮೇ 17 ರಂದು ಪಂಜಾಬ್ ನಲ್ಲಿ ಧರ್ಮಸ್ಥಳದ ಗ್ರಾಮದ ಬೊಳಿಯಾರ್ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಪುತ್ರಿ, ಏರೋಸ್ಪೇಸ್ ಉದ್ಯೋಗಿ ಆಕಾಂಕ್ಷ (22) ನಿಗೂಢವಾಗಿ ಸಾವನ್ನಪ್ಪಿದ್ದು ಈ ಪ್ರಕರಣಕ್ಕೆ ಪೊಲೀಸರ ತನಿಖೆಯಲ್ಲಿ ಟ್ವಿಸ್ಟ್ ಸಿಕ್ಕಿ, ವಿವಾಹಿತ ಪುರುಷನೊಂದಿಗಿನ ಪ್ರೀತಿ ವೈಫಲ್ಯವೇ ಈಕೆ ಸಾವಿಗೆ ಕಾರಣ ಎಂದು ತಿಳಿಸಲಾಗಿತ್ತು.
ಧರ್ಮಸ್ಥಳ ಮೂಲದ ಯುವತಿ ಏರೋಸ್ಪೇಸ್ ಉದ್ಯೋಗಿ ಪಂಜಾಬ್ನಲ್ಲಿ ನಿಗೂಢವಾಗಿ ಜೀವ ಕಳೆದುಕೊಂಡಿದ್ದರು. ಈ ಕೇಸ್ಗೆ ಸಂಬಂಧಿಸಿದಂತೆ ಯುವತಿ ಪ್ರೇಮ ವೈಫಲ್ಯದಿಂದ ಕಟ್ಟಡದ 3ನೇ ಮಹಡಿಯಿಂದ ಹಾರಿ ಪ್ರಾಣ ಬಿಟ್ಟಿದ್ದಾರೆ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಆಕಾಂಕ್ಷ ಎಸ್ ನಾಯರ್ (22) ಏರೋಸ್ಪೇಸ್ ಉದ್ಯೋಗಿಯಾಗಿದ್ದರು. ಧರ್ಮಸ್ಥಳ ಬಳಿಯ ಬೊಳಿಯಾರ್ ಗ್ರಾಮದ ಸುರೇಂದ್ರ ಮತ್ತು ಸಿಂಧೂದೇವಿ ದಂಪತಿ ಮಗಳು. ಏರೋಸ್ಪೇಸ್ ಇಂಜಿನಿಯರ್ ಆಗಿ ಡೆಲ್ಲಿಯಲ್ಲಿ 6 ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು. ಆದರೆ ಎಲ್ಪಿಯು ಪಗ್ವಾಡ ಕಾಲೇಜಿನಲ್ಲಿ ಸರ್ಟಿಫಿಕೇಟ್ ಪಡೆಯಲೆಂದು ಆಕಾಂಕ್ಷ ಪಂಜಾಬ್ಗೆ ಹೋಗಿದ್ದರು. ಆದರೆ ಅಲ್ಲಿ ಉಳಿದುಕೊಂಡಿದ್ದ ಕೊಠಡಿಯ 3ನೇ ಮಹಡಿಯಿಂದ ಬಿದ್ದು ಜೀವ ಬಿಟ್ಟಿದ್ದಾರೆ. ಇದಕ್ಕೆ ಪ್ರೇಮ ವೈಫಲ್ಯ ಕಾರಣವಾಗಿದೆ.
ಎಲ್ಪಿಯು ಪಗ್ವಾಡ ಕಾಲೇಜಿನ ಪ್ರೊಫೆಸರ್ ಆಗಿರುವ ಕೇರಳದ ಕೊಟ್ಟಾಯಂ ನಿವಾಸಿ, 2 ಮಕ್ಕಳ ತಂದೆ ಬಿಜಿಲ್ ಮ್ಯಾಥ್ಯೂ ಜೊತೆ ಯುವತಿಗೆ ಪ್ರೇಮ ವೈಫಲ್ಯವಾಗಿದೆ. ಇದಾದ ಮೇಲೆ ಪ್ರೊಫೆಸರ್ ಮನೆಗೆ ಹೋಗಿ ಮದುವೆ ಆಗುವಂತೆ ಒತ್ತಾಯಿಸಿ, ಜಗಳ ಮಾಡಿದ್ದರು. ಇದಕ್ಕೆ ಪ್ರೊಫೆಸರ್ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ.
ಆಕಾಂಕ್ಷ ಬಳಿಕ ಕಾಲೇಜಿನಲ್ಲೂ ಜಗಳ ಮಾಡಿದ್ದರು. ಇದಾದ ಮೇಲೆಯೇ ಕಟ್ಟಡದ ನಾಲ್ಕನೇ ಮಹಡಿಗೆ ಹೋಗಿ ಕೆಳಗೆ ಜಿಗಿದು ಜೀವ ಕಳೆದುಕೊಂಡಿದ್ದರು. ಇನ್ನು ಆತ್ಮಹತ್ಯೆಗೆ ಪ್ರೇರಣೆ ಹಿನ್ನೆಲೆಯಲ್ಲಿ ಪ್ರೊಫೆಸರ್ ಮ್ಯಾಥ್ಯೂ ವಿರುದ್ಧ ಪಂಜಾಬ್ನ ಜಲಂಧರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಮೃತದೇಹದ ವೈದ್ಯಕೀಯ ಪರೀಕ್ಷೆ ಬಳಿಕ ಹೆತ್ತವರಿಗೆ ಹಸ್ತಾಂತರ ಮಾಡಲಾಗುತ್ತದೆ. ಧರ್ಮಸ್ಥಳದ ಬೊಳಿಯೂರು ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನಡೆಯುತ್ತದೆ.
ಪೋಷಕರ ಆಕ್ಷೇಪ :
ಮಗಳು ಖಿನ್ನತೆಯಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇದೊಂದು ಆತ್ಮಹತ್ಯೆ ಪ್ರಕರಣ ಎಂದು ದಾಖಲಿಸಿರುವುದನ್ನು ನಾವು ಒಪ್ಪಲು ಸಾಧ್ಯವಿಲ್ಲ ಎಂದು ಆಕಾಂಕ್ಷ ಅವರ ತಂದೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆರಂಭದಲ್ಲಿ ತನಿಖೆಯ ಭರವಸೆ ನೀಡಿದ್ದ ಪೊಲೀಸರು ಇದೀಗ ತಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸುತ್ತಿದ್ದಾರೆ.
ಅಲ್ಲದೆ ಘಟನೆ ನಡೆದ ದಿನದ ಕಾಲೇಜಿನ ಸಿಸಿಟಿವಿ ಕ್ಯಾಮರಾ ಫೂಟೇಜ್ ಗಳನ್ನು ಸರಿಯಾಗಿ ನೀಡುತ್ತಿಲ್ಲ. ಆಕಾಂಕ್ಷಾ ಕೆಳಗೆ ಬೀಳುವ ದೃಶ್ಯಗಳನ್ನು ಮಾತ್ರ ತೋರಿಸಲಾಗುತ್ತಿದೆ. ಆಕೆ ಹೇಗೆ ಬಿದ್ದಳು ? ಯಾರಾದರೂ ತಳ್ಳಿದರೇ? ಅಥವಾ ಆಕೆ ಹಾರಿದಳೇ ಎಂಬುದು ಎಲ್ಲೂ ಕಾಣಿಸುತ್ತಿಲ್ಲ. ಸಿಸಿಟಿವಿ ಕ್ಯಾಮರಾದ ಸಂಪೂರ್ಣ ದಾಖಲೆಗಳನ್ನು ತೋರಿಸುವಂತೆ ಒತ್ತಾಯಿಸಿದ್ದೇವೆ. ಆದರೆ ಅದನ್ನು ನೀಡಲು ಸಂಬಂಧಪಟ್ಟವರು ಸಿದ್ಧರಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವ ಭರವಸೆ ನೀಡಿರುವುದಾಗಿ ತಿಳಿಸಿದ ಅವರು ಇದೀಗ ಎರಡನೇ ಬಾರಿಗೆ ದೂರನ್ನು ಪೊಲೀಸರು ಸ್ವೀಕರಿಸಿದ್ದು, ಯಾವ ರೀತಿ ಪ್ರಕರಣ ದಾಖಲಿಸುತ್ತಾರೆ ಎಂದು ಕಾದು ನೋಡಬೇಕಾಗಿದೆ.

