No foreign wife: ಬಾಂಗ್ಲಾದೇಶದ ಮಹಿಳೆಯರನ್ನು ಚೀನಾ ನಾಗರಿಕರು ಮದುವೆಯಾಗಬಾರದು ಎಂದು ಢಾಕಾದಲ್ಲಿರುವ ಚೀನಾದ ರಾಯಭಾರ ಕಚೇರಿಯಿಂದ ಎಚ್ಚರಿಕೆ ಆದೇಶ ನೀಡಿದೆ. ಗಡಿಯಾಚೆಗಿನ ವಿವಾಹ ವ್ಯವಸ್ಥೆಗಳ ಬಗ್ಗೆ ಚೀನಾ ತನ್ನ ನಾಗರಿಕರಿಗೆ ತೀವ್ರ ಎಚ್ಚರಿಕೆ ನೀಡಿದೆ.
ಬಾಂಗ್ಲಾದೇಶದ ಪರಿಸ್ಥಿತಿ ಉತ್ತಮವಾಗಿಲ್ಲ. ನಿರುದ್ಯೋಗ ಮತ್ತು ಆರ್ಥಿಕ ಬಿಕ್ಕಟ್ಟು ಉತ್ತುಂಗಕ್ಕೇರಿದೆ ಇಂತಹ ಸಮಯದಲ್ಲಿ, ಚೀನಾ ವಿದೇಶಿಯರನ್ನು ಮದುವೆಯಾಗುವ ಸಂದರ್ಭದಲ್ಲಿ ಕಾನೂನನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಬಾಂಗ್ಲಾದೇಶದಲ್ಲಿರುವ ಚೀನಾ ರಾಯಭಾರ ಕಚೇರಿ ತನ್ನ ನಾಗರಿಕರಿಗೆ ಎಚ್ಚರಿಕೆ ನೀಡಿದೆ.
ಬಾಂಗ್ಲಾದೇಶದಲ್ಲಿರುವ ಚೀನೀ ರಾಯಭಾರ ಕಚೇರಿ ಭಾನುವಾರ ಒಂದು ಸಲಹೆಯನ್ನು ನೀಡಿದ್ದು, ತನ್ನ ನಾಗರಿಕರು ಅಕ್ರಮ ಗಡಿಯಾಚೆಗಿನ ವಿವಾಹ ವ್ಯವಸ್ಥೆಗಳಿಂದ ದೂರವಿರಬೇಕು ಮತ್ತು ಆನ್‌ಲೈನ್ ವಿವಾಹ ಯೋಜನೆಗಳ ಬಗ್ಗೆ ಎಚ್ಚರದಿಂದಿರಬೇಕು ಎಂದು ಒತ್ತಾಯಿಸಿದೆ.
ನಿರ್ದಿಷ್ಟವಾಗಿ ಅಕ್ರಮ ಆನ್‌ಲೈನ್ ಮ್ಯಾಚ್‌ಮೇಕಿಂಗ್ ಏಜೆಂಟ್ ಮತ್ತು ವಿದೇಶಿ ಮಹಿಳೆಯರನ್ನು ಮದುವೆಯಾಗುತ್ತಿರುವ ಅಪಾಯಕಾರಿ ಬೆಳವಣಿಗೆಯ ವಿರುದ್ಧ ಎಚ್ಚರಿಕೆ ನೀಡಿದೆ. ಚೀನೀ ಪ್ರಜೆಗಳು ಬಾಂಗ್ಲಾದೇಶದ ಅಕ್ರಮ ಮ್ಯಾಚ್‌ಮೇಕಿಂಗ್ ಬಲೆಗೆ ಬೀಳಬಾರದು, ಡೇಟಿಂಗ್ ಆ್ಯಪ್ಗಳ ಬಗ್ಗೆ ಎಚ್ಚರಿಕೆಯಿಂದಿರಬೇಕು, ಬಾಂಗ್ಲಾದೇಶ ಮೂಲದವರನ್ನು ಮದುವೆಯಾಗುವಾಗ ಎಚ್ಚರಿಕೆ ಹೊಂದಬೇಕು, ಚೀನೀಯರು ಮೋಸಕ್ಕೆ ಒಳಗಾಗಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಕೆಲವು ಚೀನೀ ಪ್ರಜೆಗಳು ಬಾಂಗ್ಲಾದೇಶದಿಂದ ‘ವಧುಗಳನ್ನು ಖರೀದಿಸಲು’ ಅಥವಾ ‘ಅಕ್ರಮ ವಿವಾಹಗಳನ್ನು’ ನಡೆಸಲು ದಲ್ಲಾಳಿಗಳನ್ನು ಆಶ್ರಯಿಸುತ್ತಿದ್ದಾರೆ. ಈಗ ಇಂತಹ ಪರಿಸ್ಥಿತಿಯಲ್ಲಿ ಚೀನಾ ರಾಯಭಾರ ಕಚೇರಿ ಭಾನುವಾರ ತಡರಾತ್ರಿ ಸಲಹೆಯನ್ನು ನೀಡಿದೆ. ಬಾಂಗ್ಲಾದೇಶದಲ್ಲಿರುವ ಚೀನಾ ರಾಯಭಾರ ಕಚೇರಿಯು ತನ್ನ ನಾಗರಿಕರು ‘ವಿದೇಶಿ ಹೆಂಡತಿಯನ್ನು ಖರೀದಿಸುವ’ ತಪ್ಪು ಕಲ್ಪನೆಯನ್ನು ಸಂಪೂರ್ಣವಾಗಿ ತ್ಯಜಿಸುವಂತೆ ಕೇಳಿಕೊಂಡಿದೆ. “ಒಂದು ಸಣ್ಣ ವೀಡಿಯೊ ನೋಡಿ ದಾರಿ ತಪ್ಪಬೇಡಿ, ವಿದೇಶಿ ವಿವಾಹದ ಆಮಿಷಕ್ಕೆ ಒಳಗಾಗಿ ಕಾನೂನನ್ನು ಮುರಿಯಬೇಡಿ!” ಎಂದು ರಾಯಭಾರ ಕಚೇರಿ ತನ್ನ ನಾಗರಿಕರಿಗೆ ಸ್ಪಷ್ಟವಾಗಿ ಎಚ್ಚರಿಸಿದೆ.
ಮಾನವ ಕಳ್ಳಸಾಗಣೆ ಪ್ರಕರಣಗಳಲ್ಲಿ ಬಾಂಗ್ಲಾದೇಶ ಸರ್ಕಾರವು ತುಂಬಾ ಕಠಿಣ ನಿಲುವನ್ನು ತೆಗೆದುಕೊಳ್ಳುತ್ತದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ನಕಲಿ ವಿವಾಹದ ಮೂಲಕ ಯಾವುದೇ ವ್ಯಕ್ತಿ ಮಾನವ ಕಳ್ಳಸಾಗಣೆಯಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು. ಬಾಂಗ್ಲಾದೇಶದಲ್ಲಿ ಮಾನವ ಕಳ್ಳಸಾಗಣೆ ಆರೋಪಗಳಿಗೆ ಕನಿಷ್ಠ ಏಳು ವರ್ಷಗಳ ಜೈಲು ಶಿಕ್ಷೆ, ಜೀವಾವಧಿ ಶಿಕ್ಷೆ ಅಥವಾ ಮರಣದಂಡನೆ ಮತ್ತು ಸುಮಾರು 3.5 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಕಳ್ಳಸಾಗಣೆಯನ್ನು ಪ್ರಚೋದಿಸುವ, ಯೋಜಿಸುವ ಅಥವಾ ಸಹಾಯ ಮಾಡುವವರಿಗೆ ಮೂರರಿಂದ ಏಳು ವರ್ಷಗಳ ಜೈಲು ಶಿಕ್ಷೆ, ದಂಡ ವಿಧಿಸಲಾಗುತ್ತದೆ. ಬಾಂಗ್ಲಾದೇಶದಲ್ಲಿ ನ್ಯಾಯಾಂಗ ಪ್ರಕ್ರಿಯೆಯು ಸಾಮಾನ್ಯವಾಗಿ ದೀರ್ಘವಾಗಿರುತ್ತದೆ ಎಂದು ರಾಯಭಾರ ಕಚೇರಿ ಹೇಳಿದೆ.

