ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಪೊಲೀಸರ ದಾಳಿ ಮುಂದುವರಿದಿದೆ. ಶನಿವಾರ ಬೆಳ್ಳಂಬೆಳಗ್ಗೆ ರಾಜ್ಯದ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.ಬೆಳಗಾವಿ, ಬಾಗಲಕೋಟೆ, ಕಲಬುರಗಿ, ಉಡುಪಿ, ಗದಗ, ಹಾವೇರಿ ಹಾಗೂ ಧಾರವಾಡದಲ್ಲಿ ದಾಳಿ ನಡೆದಿದೆ.
ಬಾಗಲಕೋಟೆ, ಗದಗದ ಹುನಗುಂದ, ಹಾವೇರಿ ಸೇರಿ ಹಲವು ಕಡೆ ಲೋಕಾಯುಕ್ತ ಅಧಿಕಾರಿಗಳು ಇಂದು ಬೆಳಗ್ಗೆಯೇ ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ. ಗದಗ ನಿರ್ಮಿತಿ ಕೇಂದ್ರ ಯೋಜನಾ ನಿರ್ದೇಶಕ ಗಂಗಾಧರ್ ಶಿರೋಳ ಅವರ ಮನೆ, ಕಚೇರಿ ಸೇರಿ 6 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಗಂಗಾಧರ್ ಮನೆ, ಕಚೇರಿಗಳ ಮೇಲೆ ಅವರ ಅಳಿಯ, ಭಾವನ ಮನೆ ಸೇರಿ 6 ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಲೋಕಾಯುಕ್ತ ಎಸ್ ಪಿ ಹಣಮಂತರಾಯ ನೇತೃತ್ವದಲ್ಲಿ ದಾಳಿ ನಡೆದಿದೆ. ಬಳ್ಳಾರಿ ಜಿಲ್ಲೆ ಹೂವಿನಹಡಗಲಿ, ಹಾವೇರಿ ಜಿಲ್ಲೆಯಲ್ಲಿ ಕೂಡ ಲೋಕಾಯುಕ್ತ ದಾಳಿ ನಡೆದಿದೆ.
ಬೆಳಗಾವಿ:
ಬೆಳಗಾವಿ ಲೋಕಾಯುಕ್ತ ಎಸ್ಪಿ ಹನುಮಂತರಾಯ್ ನೇತೃತ್ವದಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ದೇವರಾಜ್ ಅರಸು ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಸಿದ್ಧಲಿಂಗಪ್ಪ ಬಾನಸಿ ಅವರ ಬೆಳಗಾವಿಯ ವಿದ್ಯಾನಗರದಲ್ಲಿರುವ ಮನೆ, ರಾಯಬಾಗ ತಾಲೂಕಿನ ಬೆಕ್ಕೇರಿ ಗ್ರಾಮದಲ್ಲಿರುವ ಮನೆ ಹಾಗೂ ಕಚೇರಿಯಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.
ಹಾವೇರಿ:
ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಬಾಡ ಗ್ರಾಮ ಪಂಚಾಯತ್ ಕಚೇರಿ ಮೇಲೆ ಶನಿವಾರ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ಇಲ್ಲಿನ ಪಿಡಿಒ ಕಚೇರಿ ಮತ್ತು ಅವರ ಮನೆಯ ಮೇಲೆ ದಾಳಿ ನಡೆಸಿದ ಲೋಕಾಯುಕ್ತರು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.
ಬಾಡ ಗ್ರಾಮ ಪಂಚಾಯಿತಿ ಅಧಿಕಾರಿ ರಾಮಕೃಷ್ಣಪ್ಪ ಗುಡಗೇರಿ ಅವರ ಕಚೇರಿ ಹಾಗೂ ಅವರಿಗೆ ಸಂಬಂಧಿಸಿದ ಧಾರವಾಡ ಹಾಗೂ ದಾವಣಗೆರೆಯ ಕೆಲವೆಡೆಯೂ ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ. ದಾವಣಗೆರೆ ಮತ್ತು ಹಾವೇರಿ ಲೋಕಾಯುಕ್ತ ಅಧಿಕಾರಿಗಳು ಜಂಟಿ ಕಾರ್ಯಚರಣೆ ಕೈಗೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಗದಗ:
ಜಿಲ್ಲೆಯ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಗಂಗಾಧರ ಶಿರೋಳ ಅವರ ಕಚೇರಿ ಹಾಗೂ ನಿವಾಸದ ಮೇಲೆಯೂ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಗಂಗಾಧರ ಅವರ ಕಚೇರಿ ಹಾಗೂ ಗದಗ ನಗರದ ಹುಡ್ಕೋ ಕಾಲೋನಿಯಲ್ಲಿನ ಮನೆಯಲ್ಲಿ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಕೈಗೊಂಡಿದ್ದಾರೆ.
ಜೊತೆಗೆ, ಗಂಗಾಧರ ಶಿರೋಳ ಅವರ ಕಚೇರಿ, ಅವರ ಅಳಿಯ ವಿಜಯ ಯಳಮೇಲಿ ಮತ್ತು ಭಾವ ನಾಗರಾಜ್ ಅಕ್ಕಿಯವರ ನಿವಾಸಗಳ ಮೇಲೆಯೂ ದಾಳಿ ನಡೆದಿದೆ. ಅಲ್ಲದೆ, ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯ ಎಸ್.ಎಸ್. ಶೆಟ್ಟರ್ ಹಾಗೂ ಹಾವೇರಿ ಜಿಲ್ಲೆಯಲ್ಲಿರುವ ಸಂಬಂಧಿಕರ ಮನೆಗಳಲ್ಲೂ ಲೋಕಾಯುಕ್ತ ತಂಡ ಪರಿಶೀಲನೆ ಕೈಗೊಂಡಿದೆ. ಈ ಮೂಲಕ ಒಟ್ಟು ಆರು ಕಡೆಗಳಲ್ಲಿ ದಾಳಿ ನಡೆದಿದೆ ಎಂಬ ಮಾಹಿತಿ ಲಭ್ಯವಾಗಿದೆ. ಲೋಕಾಯುಕ್ತ ಎಸ್ಪಿ ಹನುಮಂತರಾಯ ಹಾಗೂ ಡಿವೈಎಸ್ಪಿ ವಿಜಯ ಬಿರಾದಾರ ನೇತೃತ್ವದ ತಂಡವು ಸ್ಥಳೀಯ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿದೆ.
ಧಾರವಾಡ:
ಇಲ್ಲಿನ ಲೋಕೋಪಯೋಗಿ ಇಲಾಖೆ ಮುಖ್ಯ ಇಂಜಿನಿಯರ್ ಹೆಚ್.ಸುರೇಶ್ ಅವರ ಮನೆ ಮೇಲೆ ಲೋಕಾಯುಕ್ತ ದಾಳಿ ಮಾಡಲಾಗಿದೆ. ಕೆಸಿಡಿ ವೃತ್ತದ ಬಳಿ ಇರುವ ಸರ್ಕಾರಿ ಕ್ವಾರ್ಟರ್ಸ್ ಮೇಲೆ ದಾಳಿ ನಡೆದಿದ್ದು, ಅಧಿಕಾರಿಗಳು ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.
ಬಳ್ಳಾರಿ: ಬಳ್ಳಾರಿ ಪಿಡಬ್ಲ್ಯೂಡಿ ಸೆಕ್ಷನ್ ಇಂಜಿನಿಯರ್ ಅಮೀನ್ ಮುಕ್ತಾರ್ ಅವರ ಕಚೇರಿ ಹಾಗೂ ಕಲಬುರಗಿಯ ಹುಸೇನಿ ಗಾರ್ಡನ್ ಬಡಾವಣೆಯಲ್ಲಿರುವ ನಿವಾಸದ ಮೇಲೆ ಲೋಕಾಯುಕ್ತರು ದಾಳಿ ಮಾಡಿದ್ದಾರೆ. ಅಲ್ಲದೆ, ಇಂಜಿನಿಯರ್ಗೆ ಸಂಬಂಧಿಸಿದಂತೆ ಬಸವಕಲ್ಯಾಣದಲ್ಲೂ ಅಧಿಕಾರಿಗಳು ಪರಿಶೀಲನೆ ಕೈಗೊಂಡಿದ್ದಾರೆ. ಕಲಬುರಗಿ ಹಾಗೂ ಬಳ್ಳಾರಿ ಲೋಕಾ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಬಾಗಲಕೋಟೆ:
ಜಿಲ್ಲಾ ಪಂಚಾಯತ್ ಅಕೌಟೆಂಟ್ ಶ್ರೀಶೈಲ್ ತತ್ರಾಣಿ ಎಂಬವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ತತ್ರಾಣಿ ಅವರಿಗೆ ಸೇರಿದ ಹುನಗುಂದ ತಾಲೂಕಿನ ಅಮೀನಗಡದಲ್ಲಿರುವ ಮೂರು ಮನೆಗಳಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಉಡುಪಿ:
ಜಿಲ್ಲೆಯ ಕಾರ್ಕಳದ ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್ (ಬೆಸ್ಕಾಂ) ಅಕೌಂಟೆಂಟ್ ಗಿರೀಶ್ ರಾವ್ ಅವರ ಮನೆ ಹಾಗೂ ಕಚೇರಿ ಮೇಲೆಯೂ ಲೋಕಾಯುಕ್ತ ದಾಳಿ ನಡೆದಿದೆ.

