ಶ್ರೀನಗರ: ಜುಲೈ 3ರಿಂದ ಆರಂಭವಾಗಲಿರುವ ಅಮರನಾಥ ಯಾತ್ರೆಯಲ್ಲಿ ಯಾತ್ರಿಕರ ಭದ್ರತೆಗಾಗಿ ಭಾರತೀಯ ಸೇನೆ, ಸಿಆರ್‌ಪಿಎಫ್ ಹಾಗೂ ಕಾಶ್ಮೀರ ಪೊಲೀಸ್ ಇಲಾಖೆ ಜಂಟಿಯಾಗಿ `ಆಪರೇಷನ್ ಶಿವ’ ಕಾರ್ಯಾಚರಣೆ ನಡೆಸಲು ತೀರ್ಮಾನಿಸಲಾಗಿದೆ.
ಸುಮಾರು 50,000 ಅರೆಸೆನಾಪಡೆ ಸಿಬ್ಬಂದಿ ಮತ್ತು ಕಾಶ್ಮೀರ ಪೊಲೀಸರು ನಿತ್ಯ ಸ್ಫೋಟಕಗಳ ಪತ್ತೆ ಕಾರ್ಯಾಚರಣೆ ನಡೆಸಲಿದ್ದಾರೆ. ನೋಂದಾಯಿತ ಯಾತ್ರಿಕರಿಗೆ ‘ಆರ್‌ಎಫ್‌ಐಡಿ’ ಟ್ಯಾಗ್ ನೀಡಲಾಗಿದ್ದು, ಅಮರನಾಥ ಯಾತ್ರೆಯ ಪ್ರತಿಯೊಂದು ಕ್ಷಣದ ಮೇಲೂ ಇದರ ಮೂಲಕ ನಿಗಾವಹಿಸಬಹುದಾಗಿದೆ.
ಸುಧಾರಿತ ಭದ್ರತಾ ತಂತ್ರಜ್ಞಾನ, ಸಿಸಿಟಿವಿ, ಜಾಮರ್‌ಗಳ ಅಳವಡಿಕೆ, ಡ್ರೋನ್ ಕ್ಯಾಮೆರಾ, ಸಶಸ್ತ್ರ ಪಡೆ ಕಣ್ಗಾವಲು ಸೇರಿದಂತೆ ಗರಿಷ್ಠ ಮಟ್ಟದ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭದ್ರತೆಯ ದೃಷ್ಟಿಯಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ವರದಿಗಳು ತಿಳಿಸಿವೆ.
‘ಆಪರೇಷನ್ ಶಿವ’ ಅಮರನಾಥ ಯಾತ್ರಿಕರಿಗೆ ಹೆಜ್ಜೆ ಹೆಜ್ಜೆಗೂ ಸುರಕ್ಷಿತ ಹಾಗೂ ಸುಗಮ ಪ್ರಯಾಣವನ್ನು ಮಾಡಲು ಅನುಕೂಲ ಮಾಡಿಕೊಡಲಿದೆ. ಇನ್ನೂ ಜುಲೈ 3ರಿಂದ ಅಮರನಾಥ ಯಾತ್ರೆ ಆರಂಭಗೊಳ್ಳಲಿದ್ದು ಆಗಸ್ಟ್ 9ಕ್ಕೆ ಮುಗಿಯಲಿದೆ. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ 14 ದಿನಗಳು ಯಾತ್ರೆ ಅವಧಿ ತಗ್ಗಲಿದೆ. ಭದ್ರತಾ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

