ತಿರುವನಂತಪುರಂ: ವಿಶ್ವದ ಅತಿದೊಡ್ಡ ಕಂಟೇನರ್ ಹಡಗು ಎಂಎಸ್‌ಸಿ ಐರಿನಾ ಸೋಮವಾರ ಬೆಳಿಗ್ಗೆ ವಿಳಿಂಜಂ ಅಂತರರಾಷ್ಟ್ರೀಯ ಬಂದರಿಗೆ ಆಗಮಿಸಿದೆ. MSC IRINA ಸೋಮವಾರ ಬೆಳಿಗ್ಗೆ 8 ಗಂಟೆಗೆ ವಿಳಿಂಜಂ ಬಂದರಿಗೆ ಆಗಮಿಸಿದ್ದು, ಜಲ ಗೌರವ ನೀಡುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಲಾಯಿತು. ಎಂಎಸ್‌ಸಿ ಐರಿನಾ 24,346 TEU ಸಾಮರ್ಥ್ಯವನ್ನು ಹೊಂದಿದ್ದು ಮಂಗಳವಾರದವರೆಗೆ ಈ ಬಂದರಿನಲ್ಲಿ ತಂಗುವ ನಿರೀಕ್ಷೆಯಿದೆ.
399.9 ಮೀಟರ್ ಉದ್ದ ಮತ್ತು 61.3 ಮೀಟರ್ ಅಗಲವಿರುವ ಈ ಹಡಗು FIFA ನಿಗದಿ ಮಾಡಿದ ಫುಟ್‌ಬಾಲ್ ಮೈದಾನಕ್ಕಿಂತ ಸರಿಸುಮಾರು ನಾಲ್ಕು ಪಟ್ಟು ಉದ್ದವನ್ನು ಹೊಂದಿದೆ. 24,346 TEU ಸಾಮರ್ಥ್ಯವಿರುವ ವಿಶ್ವದ ಅತಿದೊಡ್ಡ ಕಂಟೇನರ್ ಹಡಗಾಗಿರುವ MSC ಐರಿನಾವನ್ನು ನಮ್ಮ ವಿಳಿಂಜಂ ಬಂದರಿಗೆ ಸ್ವಾಗತಿಸಲು ಹೆಮ್ಮೆಪಡುತ್ತೇವೆ. ದಕ್ಷಿಣ ಏಷ್ಯಾದ ಬಂದರಿಗೆ ಮೊದಲ ಬಾರಿ ಆಗಮಿಸಿದೆ.
ಭಾರತದಲ್ಲಿ ದೊಡ್ಡ ಮತ್ತು ಸಣ್ಣ ಬಂದರುಗಳಿವೆ. ಆದರೆ ಇಲ್ಲಿಯವರೆಗೆ Transshipment Port ಇರಲಿಲ್ಲ. ವಿಳಿಂಜಂ ದೇಶದ ಮೊದಲ Transshipment ಬಂದರು ಆಗಿದ್ದು, ಇಲ್ಲಿ ಹಡಗಿನಿಂದ ಹಡಗಿಗೆ ಸರಕನ್ನು ಸಾಗಿಸಬಹುದಾಗಿದೆ. ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಸುಮಾರು 8,800 ಕೋಟಿ ರೂ. ವೆಚ್ಚದಲ್ಲಿ ಈ ಬಂದರನ್ನು ನಿರ್ಮಾಣ ಮಾಡಲಾಗಿದ್ದು ಮೇ 2 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಈ ಬಂದರನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿದ್ದರು.
ಕೋಝಿಕ್ಕೋಡ್‌ನ ಬೇಪೋರ್ ಕರಾವಳಿಯಲ್ಲಿ ಸರಕು ಹಡಗಿಗೆ ಬೆಂಕಿ
ಸರಕು ಹಡಗಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿರುವ ಘಟನೆ ಕೋಝಿಕ್ಕೋಡ್‌ನ ಬೇಪೋರ್ ಕರಾವಳಿಯ ಬಳಿ ನಡೆದಿದೆ. ಬೆಂಕಿಯ ಪರಿಣಾಮ ಹಡಗಿನಲ್ಲಿದ್ದ ಸುಮಾರು 20 ಕಂಟೇನರ್‌ಗಳು ಸಮುದ್ರಕ್ಕೆ ಬಿದ್ದಿದೆ.
12.5 ಮೀಟರ್ ಡ್ರಾಫ್ಟ್ ಹೊಂದಿರುವ 270 ಮೀಟರ್ ಉದ್ದದ ಎಂವಿ ವಾನ್ ಹೈ 503 ಎಂಬ ಹಡಗು ಜೂನ್ 7 ರಂದು ಕೊಲಂಬೊದಿಂದ ಹೊರಟು ಮುಂಬೈಗೆ ಹೋಗುತ್ತಿದ್ದ ವೇಳೆ ಬೆಂಕಿ ಕಾಣಿಸಿಕೊಂಡಿದೆ.
ಸುಮಾರು 650 ಕಂಟೇನರ್‌ಗಳಿದ್ದ ಈ ಹಡಗಿನಲ್ಲಿ ಚೈನೀಸ್, ಮ್ಯಾನ್ಮಾರ್, ಇಂಡೋನೇಷ್ಯಾ ಹಾಗೂ ಥೈಲ್ಯಾಂಡ್‌ಗೆ ಸೇರಿದ 22 ಮಂದಿ ಸಿಬ್ಬಂದಿ ಇದ್ದರು. ಬೆಂಕಿ ಕಾಣಿಸಿಕೊಂಡ ವೇಳೆ 18 ಮಂದಿ ಸಮುದ್ರಕ್ಕೆ ಹಾರಿದ್ದು, ಎಲ್ಲಾ 18 ಮಂದಿಯನ್ನು ರಕ್ಷಿಸಲಾಗಿದೆ. ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಇನ್ನು ಘಟನೆಯಲ್ಲಿ ನಾಲ್ವರು ನಾಪತ್ತೆಯಾಗಿದ್ದಾರೆ.

