ಮಂಗಳೂರು: ಕೇರಳದ ಕರಾವಳಿಯಲ್ಲಿ ಬೆಂಕಿಗಾಹುತಿಯಾಗಿರುವ ಸಿಂಗಾಪುರದ ಕಂಟೇನರ್ ಹಡಗಿಗೆ ಕರಾವಳಿ ಕಾವಲು ಪಡೆ ನೀರನ್ನು ಹಾಯಿಸಿ ಬೆಂಕಿಯನ್ನು ನಿಯಂತ್ರಿಸಿದೆ. ಆದರೂ ದಟ್ಟವಾದ ಹೊಗೆ ಇನ್ನೂ ಹಾಗೇ ಉಳಿದಿದೆ ಎಂದು ಭಾರತೀಯ ಕರಾವಳಿ ರಕ್ಷಣಾ ಪಡೆ ತಿಳಿಸಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಕರಾವಳಿ ರಕ್ಷಣಾ ಪಡೆ, ಹಡಗುಗಳ ಮಧ್ಯದಿಂದ ಬೆಂಕಿ ಮತ್ತು ಸ್ಫೋಟಗಳು ಮುಂದುವರೆದಿವೆ. ದಟ್ಟವಾದ ಹೊಗೆ ಉಳಿದಿದ್ದರೂ, ಬೆಂಕಿ ಈಗ ನಿಯಂತ್ರಣದಲ್ಲಿದೆ. ಹೆಚ್ಚಿನ ಕಂಟೇನರ್‌ಗಳು ಹಡಗಿನಲ್ಲಿವೆ ಎಂದು ವರದಿಯಾಗಿದೆ. ಭಾರತೀಯ ಕರಾವಳಿ ರಕ್ಷಣಾ ಪಡೆ ಹಡಗುಗಳಾದ ಸಮುದ್ರ ಪ್ರಹರಿ ಮತ್ತು ಸಚೇತ್ ಅಗ್ನಿಶಾಮಕ ಕಾರ್ಯಾಚರಣೆ ನಡೆಸುತ್ತಿವೆ. ಐಸಿಜಿ ಹಡಗು ಸಮರ್ಥ್ ಜೊತೆಗೆ ಕೊಚ್ಚಿಯಿಂದ ರಕ್ಷಣಾ ಪಡೆಗಳನ್ನು ನಿಯೋಜಿಸಲಾಗುತ್ತಿದೆ.
ಇನ್ನು ಕಂಟೇನರ್ ಹಡಗಿನಿಂದ ಹದಿನೆಂಟು ಸಿಬ್ಬಂದಿಯನ್ನು ಭಾರತೀಯ ನೌಕಾ ಹಡಗು ಐಎನ್‌ಎಸ್ ಸೂರತ್ ಸುರಕ್ಷಿತವಾಗಿ ಪಣಂಬೂರಿನ ನ್ಯೂ ಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ) ಕೋಸ್ಟ್ ಗಾರ್ಡ್ ಬರ್ತ್‌ಗೆ ಕರೆತರಲಾಗಿದೆ. ಅವರಿಗೆ ಮಂಗಳೂರಿನಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ. ನಾಪತ್ತೆಯಾಗಿರುವ ನಾಲ್ವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.

