Belagavi : ರಾಜ್ಯ ರಾಜಕಾರಣದಲ್ಲಿ ದಿನಕ್ಕೊಂದು ಬದಲಾವಣೆ ಆಗುತ್ತದೆ. ಯಾವಾಗ ಯಾರು ದೋಸ್ತ್‌ಗಳಾಗ್ತಾರೋ, ದೋಸ್ತ್‌ಗಳು ಶತ್ರುಗಳಾಗ್ತಾರೋ ಗೊತ್ತಾಗಲ್ಲ. ಕೆಲವೊಮ್ಮೆ ರಾಜಕಾರಣದ ಕಾರಣದಿಂದ ರಕ್ಯಸಂಬಂಧಿಗಳ ನಡುವೆ ಸಹ ಬಿರುಕು ಮೂಡುತ್ತದೆ. ಕಳೆದ ಕೆಲ ಸಮಯದಿಂದ ಒಟ್ಟಿಗೆ ಕಾಣಿಸಿಕೊಳ್ಳದ ಜಾರಕಿಹೊಳಿ ಬ್ರದರ್ಸ್ ಇದೀಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಲಕ್ಷ್ಮೀ ದೇವಿ ಜಾತ್ರೆಗೆ ಸಂಬಂಧಿಸಿದಂತೆ ತಯಾರಿ ಸಭೆಯಲ್ಲಿ ಇಬ್ಬರೂ ಭಾಗವಹಿಸಿದ್ದು, ವೇದಿಕೆಯಲ್ಲಿ ಸಚಿವ ಸತೀಶ್ ಜಾರಕಿಹೊಳಿ, ಶಾಸಕ ರಮೇಶ್ ಜಾರಕಿಹೊಳಿ ಕಾಣಿಸಿಕೊಂಡಿದ್ದಾರೆ. ಸುಮಾರು 10 ವರ್ಷಗಳ ನಂತರ ಈ ಜಾತ್ರೆ ನಡೆಯುತ್ತಿದ್ದು, ಈ ವಿಚಾರವಾಗಿ ಅಣ್ಣ-ತಮ್ಮ ಒಟ್ಟಿಗೆ ಸೇರಿದ್ದಾರೆ.
ಸಭೆ ಪ್ರಾರಂಭವಾದಾಗ ಇಬ್ಬರೂ ಮಾತನ್ನ ಆಡಿರಲಿಲ್ಲ. ರಾಜಕಾರಣದ ಬಗ್ಗೆ ಭಿನ್ನಾಭಿಪ್ರಾಯ ಇದ್ದ ಕಾರಣ ಇಬ್ಬರೂ ಎಲ್ಲೂ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಆದರೆ ಇದೀಗ ಕಾಣಿಸಿಕೊಂಡು, ಜಾತ್ರೆಯ ವಿಚಾರಕ್ಕೆ ಸಂಬಂಧಿಸಿದಂತೆ ಒಬ್ಬರಿಗೊಬ್ಬರು ಸಪೋರ್ಟ್ ಮಾಡಿಕೊಂಡು ಮಾತನಾಡಿದ್ದಾರೆ.
ಜಿಲ್ಲಾಧಿಕಾರಿ ಜೊತೆ ಜಾತ್ರೆಯ ಪೂರ್ವ ಸಿದ್ಧತೆಗಳ ಬಗ್ಗೆ ವಿವರಣೆ ಪಡೆದುಕೊಂಡಿರುವ ಅವರು, ಜನರನ್ನ ನಿಯಂತ್ರಿಸಲು ಏನು ಮಾಡಬೇಕು, ಎಷ್ಟೆಲ್ಲಾ ಸಿಬ್ಬಂದಿ ಅವಶ್ಯಕತೆ ಬೀಳಲಿದೆ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಬಗ್ಗೆ ಸಹ ಮಾಹಿತಿ ಪಡೆದಿದ್ದಾರೆ.

