ಹೈದರಾಬಾದ್: ಆಂಧ್ರಪ್ರದೇಶದ ವಿಶಾಖಪಟ್ಟಣಂನಲ್ಲಿರುವ ಹಾಸ್ಟೆಲ್‌ನ ವಾರ್ಡನ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ. ರಾಜ್ಯ ಗೃಹ ಸಚಿವೆ ವಂಗಲಪುಡಿ ಅನಿತಾ ಅವರು ಹಾಸ್ಟೆಲ್ ಆವರಣದಲ್ಲಿ ನಡೆಸಿದ ಹಠಾತ್ ತಪಾಸಣೆಯ ಸಮಯದಲ್ಲಿ ಅವರ ಊಟದಲ್ಲಿ ಜಿರಳೆ ಕಂಡುಬಂದಿದೆ. ಹೀಗಾಗಿ ಅಮಾನತು ಮಾಡಲಾಗಿದೆ. ಎಕ್ಸ್ ನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ವಂಗಲಪುಡಿ ಅನಿತಾ ಕೆಲವು ವಿದ್ಯಾರ್ಥಿನಿಯರೊಂದಿಗೆ ಊಟ ಮಾಡುತ್ತಿರುವುದನ್ನು ತೋರಿಸಲಾಗಿದೆ. ಹಾಸ್ಟೆಲ್‌ನಲ್ಲಿ ಶುಚಿತ್ವದ ಕೊರತೆ ಇದೆ ಎಂದು ಕಂಡು ಬಂದ ಕೂಡಲೇ ಸಚಿವೆ ಅಮಾನತು ಆದೇಶವನ್ನು ಹೊರಡಿಸಿದ್ದಾರೆ.
ಗೃಹ ಸಚಿವೆ ಊಟ ಮಕ್ಕಳೊಂದಿಗೆ ಕೂತು ಊಟ ಸವಿಯುತ್ತಿದ್ದರು. ಆಗ ಅವರ ಬಟ್ಟಲಿನಲ್ಲಿ ಜಿರಳೆ ಕಾಣಿಸಿಕೊಂಡಿದೆ. ಅದನ್ನು ನೋಡಿದ ಸಚಿವೆ ತಕ್ಷಣ ಸತ್ತ ಜಿರಲೆಯನ್ನು ತನ್ನ ಕೈನಲ್ಲಿ ಹಿಡಿದು ವಾರ್ಡನ್‌ಗೆ ತೋರಿಸಿದ್ದಾರೆ. ತಮ್ಮ ತಪಾಸಣೆಯ ಸಮಯದಲ್ಲಿ ಹಾಸ್ಟೆಲ್ ಆವರಣದಲ್ಲಿ ಯಾವುದೇ ಸಿಸಿಟಿವಿ ಕ್ಯಾಮೆರಾಗಳಿಲ್ಲ ಮತ್ತು ವಾರ್ಡನ್ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಹಾಸ್ಟೆಲ್‌ನಿಂದ ಹೊರಟು ಹೋಗುತ್ತಾರೆ ಎಂಬ ದೂರನ್ನು ಗೃಹ ಸಚಿವರು ಆಲಿಸಿದ್ದಾರೆ. ವರದಿಯ ಪ್ರಕಾರ, ವಾರ್ಡನ್ ರಾತ್ರಿ 9 ಗಂಟೆಯವರೆಗೆ ಹಾಸ್ಟೆಲ್‌ನಲ್ಲಿ ಇರಬೇಕಿತ್ತು, ಆದರೆ ಸಂಜೆ 5 ಗಂಟೆಯೊಳಗೆ ಹೊರಟು ಹೋಗಿದ್ದರು.
ಈ ಘಟನೆಯ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅನಿತಾ, ಹಾಸ್ಟೆಲ್ ಆವರಣದಲ್ಲಿನ ಇತರ ಲೋಪಗಳ ಬಗ್ಗೆ ವಿವರಗಳನ್ನು ನೀಡಿದರು ಮತ್ತು ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಅಕ್ಕಿ ಉತ್ತಮ ಗುಣಮಟ್ಟದ್ದಾಗಿಲ್ಲ ಮತ್ತು ನಿಗದಿತ ಮೆನುವಿನ ಪ್ರಕಾರವೂ ಇಲ್ಲ. ಹೀಗಾಗಿ ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿ ಅಮಾನತು ಆದೇಶವನ್ನು ನೀಡಿದ್ದೇನೆ ಎಂದು ಹೇಳಿದ್ದಾರೆ. ಜಿಲ್ಲೆಯ ಎಲ್ಲಾ ಹಾಸ್ಟೆಲ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಅವರು ಆದೇಶಿಸಿದರು ಮತ್ತು ಎಲ್ಲಾ ಹಾಸ್ಟೆಲ್‌ಗಳ ನಿಯಮಿತ ತಪಾಸಣೆಗೆ ಸೂಚನೆ ನೀಡಿದ್ದಾರೆ.

