ನವದೆಹಲಿ: ಎರಡು ವರ್ಷಗಳ ಹಿಂದೆ ಸಂಸತ್‌ನಲ್ಲಿ ಸ್ಮೋಕ್ ಕ್ಯಾನ್ ಸಿಡಿಸಿ ಕೆಲ ಕಾಲ ಆತಂಕ ಸೃಷ್ಟಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್ ಆರೋಪಿಗಳಿಬ್ಬರಿಗೆ ಇಂದು ಜಾಮೀನು ಮಂಜೂರು ಮಾಡಿದೆ. 50,000ರೂ. ದಂಡ ವಿಧಿಸುವ ಮೂಲಕ ಕೋರ್ಟ್ ಇಬ್ಬರು ಆರೋಪಿಗಳಾದ ನೀಲಂ ಆಜಾದ್ ಮತ್ತು ಮಹೇಶ್ ಕುಮಾವತ್‌ಗೆ ಷರತ್ತುಬದ್ಧ ಜಾಮೀನು ಜಾರಿಗೊಳಿಸಿದೆ.
ದೆಹಲಿ ಹೈಕೋರ್ಟ್ ತನ್ನ ಆದೇಶದಲ್ಲಿ, ನೀಲಂ ಆಜಾದ್ ಮತ್ತು ಮಹೇಶ್ ಕುಮಾವತ್ ಮಾಧ್ಯಮಗಳಿಗೆ ಯಾವುದೇ ಸಂದರ್ಶನಗಳನ್ನು ನೀಡಬಾರದು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ಏನನ್ನೂ ಪೋಸ್ಟ್ ಮಾಡುವುದನ್ನು ನಿರ್ಬಂಧಿಸಬೇಕು ಎಂದು ಹೇಳಿದೆ. ಅಲ್ಲದೇ ಪ್ರತಿ ಸೋಮವಾರ, ಬುಧವಾರ ಮತ್ತು ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಪೊಲೀಸರ ಮುಂದೆ ಹಾಜರಾಗುವಂತೆ ನ್ಯಾಯಾಲಯವು ಆರೋಪಿಗಳಿಗೆ ಸೂಚಿಸಿದೆ.
2023 ಡಿಸೆಂಬರ್‌ನಲ್ಲಿ ಸಂಸತ್‌ನಲ್ಲಿ ಚಳಿಗಾಲದ ಅಧಿವೇಶನ ನಡೆಸಯುತ್ತಿದ್ದ ವೇಳೆ ಈ ಸ್ಮೋಕ್ ಬಾಂಬ್ ಸ್ಫೋಟಗೊಂಡಿತ್ತು.ಪಾಸ್ ಪಡೆದಿದ್ದ ಇಬ್ಬರು ದುಷ್ಕರ್ಮಿಗಳು ಲೋಕಸಭೆಯ ಗ್ಯಾಲರಿಯಿಂದ ಸಂಸದರು ಕುಳಿತಿದ್ದ ಸ್ಥಳಕ್ಕೆ ಧುಮುಕಿ ಬಣ್ಣದ ಹೊಗೆ ಬರುವ ವಸ್ತುಗಳನ್ನು ಸ್ಫೋಟಿಸಿದ್ದರು. ಇದೇ ವೇಳೆ ಸಂಸತ್‌ನ ಹೊರಗೆ ಇದ್ದ ಓರ್ವ ಯುವತಿ ಹಾಗೂ ಯುವಕ ಕೂಡಾ ಬಣ್ಣದ ಹೊಗೆ ಬರುವ ಸ್ಮೋಕ್ ಬಾಂಬ್, ಕಲರ್ ಸ್ಪ್ರೇ ಮಾದರಿಯ ವಸ್ತುಗಳನ್ನು ಸ್ಫೋಟಿಸಿದ್ದರು. ಈ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ಇನ್ನು ಲೋಕಸಭೆ ಒಳಗೆ ಅಕ್ರಮವಾಗಿ ಪ್ರವೇಶಿಸಿದ ಇಬ್ಬರ ಪೈಕಿ ಓರ್ವನನ್ನು ಮಹಾರಾಷ್ಟ್ರದ ಸಾಗರ್ ಶರ್ಮಾ ಎಂದು ಗುರುತಿಸಲಾಗಿತ್ತು.
ಮತ್ತೊಬ್ಬ ಮೈಸೂರಿನ ಮನೋರಂಜನ್. ಇನ್ನು ಸಂಸತ್‌ನ ಹೊರಗೆ ಬಣ್ಣದ ಹೊಗೆ ಹಾಕಿದ ಆರೋಪಿಗಳ ಪೈಕಿ 42 ವರ್ಷ ವಯಸ್ಸಿನ ನೀಲಂ ಆಜಾದ್ ಹರ್ಯಾಣದವರು ಹಾಗೂ 25 ವರ್ಷ ವಯಸ್ಸಿನ ಅಮೋಲ್ ಶಿಂಧೆ ಮಹಾರಾಷ್ಟ್ರದ ಲಾತೂರಿನ ಮೂಲದವನು. ಇವರ ಜೊತೆ ಮಹೇಶ್ ಕುಮಾವತ್ ಕೂಡ ಕೈ ಜೋಡಿಸಿದ್ದ ಎನ್ನಲಾಗಿದೆ. ಇದೀಗ ಪ್ರಕರಣದಲ್ಲಿ ನೀಲಂ ಮತ್ತು ಮಹೇಶ್ ಕುಮಾವತ್ ಜಾಮೀನು ಸಿಕ್ಕಿದೆ.

