ಬೆಂಗಳೂರು: ಕರ್ನಾಟಕದ ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್ ಅವರು ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅಸಂಸದೀಯ ಪದಗಳನ್ನು ಬಳಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ವಿರುದ್ಧ ಅಸಂಸದೀಯ ಪದ ಬಳಕೆ ಮಾಡಿದ ಆರೋಪ ಮೇಲೆ ಬಿಜೆಪಿ ಪರಿಷತ್ ಸದಸ್ಯ ಎನ್. ರವಿಕುಮಾರ್ ವಿರುದ್ಧ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಸ್.ಮನೋಹರ್ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಅಲ್ಲದೆ ಎನ್ ರವಿಕುಮಾರ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ. ಈ ಘಟನೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.
ಮೂಲಗಳ ಪ್ರಕಾರ ವಿಧಾನಸೌಧದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್ ರವಿಕುಮಾರ್ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದರು ಎಂದು ಹೇಳಲಾಗಿದೆ. ಅಂದು ರವಿಕುಮಾರ್ ಅವರು, ‘ಶಾಲಿನಿ ರಜನೀಶ್ ಅವರು ರಾತ್ರಿಯಿಡೀ ರಾಜ್ಯ ಸರ್ಕಾರಕ್ಕಾಗಿ ಮತ್ತು ಇಡೀ ದಿನ ಮುಖ್ಯಮಂತ್ರಿಗಾಗಿ ಕೆಲಸ ಮಾಡುತ್ತಾರೆ ಎಂದು ಹೇಳಿದ್ದರು’ ಎನ್ನಲಾಗಿದೆ.
ಮಹಿಳೆಯರನ್ನು ನಿಂದಿಸುವುದೇ ಬಿಜೆಪಿಗರ ಕೆಲಸ: ಲಕ್ಷ್ಮೀ ಹೆಬ್ಬಾಳ್ಕರ್
ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ಆರೋಪ ಹೊತ್ತಿರುವ ಬಿಜೆಪಿಯ ವಿಧಾನ ಪರಿಷತ್ ಸದಸ್ಯ ರವಿಕುಮಾರ್ ವಿರುದ್ಧ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಕಿಡಿಕಾರಿದ್ದಾರೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕರ್ನಾಟಕದ ಬಿಜೆಪಿ (BJP) ನಾಯಕರಿಂದ ಮಹಿಳೆಯರ ನಿಂದನೆ ನಿರಂತರವಾಗಿ ನಡೆಯುತ್ತಿದೆ. ಓರ್ವ ಹಿರಿಯ ಮಹಿಳಾ ಐಎಎಸ್ ಅಧಿಕಾರಿ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ರೀತಿ ಬಿಜೆಪಿ ಎಂಎಲ್‌ಸಿ ಅವರ ಮನಸ್ಥಿತಿ ಎಂಥಹದ್ದು ಎಂದು ತೋರಿಸುತ್ತದೆ. ರವಿಕುಮಾರ್ ( ಅವರು ಸಮಸ್ತ ಮಹಿಳಾ ಕುಲಕ್ಕೆ ಮಾಡಿರುವ ಅವಮಾನ ಇದಾಗಿದೆ. ರವಿಕುಮಾರ್ ಅವರ ಹೇಳಿಕೆಯನ್ನು ಕೇಂದ್ರ ಬಿಜೆಪಿ ನಾಯಕರು ಸಮರ್ಥಿಸಿಕೊಳ್ಳುವರೇ ಎಂದು ಪ್ರಶ್ನಿಸಿದ್ದಾರೆ.
ಕಳೆದ ಬೆಳಗಾವಿ ಅಧಿವೇಶನದ ವೇಳೆಯಲ್ಲಿ ಸಿಟಿ ರವಿ ಅವರು ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದಾಗ ಆ ಪಕ್ಷದ ನಾಯಕರು ಒಂದೂ ಮಾತನಾಡಲಿಲ್ಲ. ಇಂತಹ ನಾಯಕರ ಹೇಳಿಕೆಗಳಿಗೆ ಕೇಂದ್ರದ ನಾಯಕರು ಪರೋಕ್ಷ ಬೆಂಬಲ ನೀಡಿದಂತಿದೆ. ಇದು ಬಿಜೆಪಿ ನಾಯಕರು ಮಹಿಳೆಯರಿಗೆ ಕೊಡುವ ಗೌರವ ಎಂತಹದ್ದು ಎಂಬುದನ್ನು ತೋರಿಸುತ್ತದೆ. ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಇಂತಹ ಅವಹೇಳನಕಾರಿ ಪದಗಳನ್ನು ಬಳಸುವ ಬಿಜೆಪಿ ನಾಯಕರಿಗೆ ಬುದ್ಧಿ ಭ್ರಮಣೆಯಾಗಿದೆ ಅನಿಸುತ್ತದೆ. ಇನ್ನು ಮುಂದಾದರೂ ಇಂತಹ ಹೇಳಿಕೆಗಳನ್ನು ನೀಡದೇ ಜವಾಬ್ದಾರಿಯಿಂದ ವರ್ತಿಸಲಿ ಎಂದು ಹೇಳಿದ್ದಾರೆ.
ಸಾರ್ವಜನಿಕವಾಗಿ ಮಹಿಳಾ ಅಧಿಕಾರಿ ಬಗ್ಗೆ ಕೆಟ್ಟದಾಗಿ ಮಾತನಾಡಿರುವ ರವಿಕುಮಾರ್ ಅವರು ಕೂಡಲೇ ಕ್ಷಮೆಯಾಚಿಸಬೇಕು. ತಮ್ಮ ತಪ್ಪನ್ನು ಅರಿವು ಮಾಡಿಕೊಂಡು ಕ್ಷಮೆ ಕೇಳಲಿ, ಇಲ್ಲವಾದರೆ ರವಿಕುಮಾರ್ ಅವರು ಸಾರ್ವಜನಿಕರ ಪ್ರತಿಭಟನೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

