ಹೈದರಾಬಾದ್: ಬೆಟ್ಟಿಂಗ್ ಆ್ಯಪ್ ಮೂಲಕ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ತೆಲುಗು ನಟರಾದ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಮತ್ತು ಪ್ರಕಾಶ್ ರಾಜ್ ಸೇರಿ 29 ಜನರ ವಿರುದ್ಧ ಜಾರಿ ನಿರ್ದೇಶನಾಲಯ (ED) ಪ್ರಕರಣದ ದಾಖಲಿಸಿದೆ.
ನಟ, ನಟಿಯರ ಜತೆಗೆ ಸಾಮಾಜಿಕ ಮಾಧ್ಯಮ ಇನ್‌ಫುಯನ್ವರ್, ಯುಟ್ಯೂಬರ್‌ಗಳು ಈ ಪಟ್ಟಿಯಲ್ಲಿದ್ದಾರೆ ಎಂದು ED ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ. ಐದು ರಾಜ್ಯಗಳ ಪೊಲೀಸರು ದಾಖಲಿಸಿಕೊಂಡಿರುವ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ಆಧರಿಸಿ ಜಾರಿ ನಿರ್ದೇಶನಾಲಯವು ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ. ಇದರಲ್ಲಿ ಆರೋಪಿತರು ಬೆಟ್ಟಿಂಗ್ ಮತ್ತಿತರ ಜೂಜುಗಳ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಪಾಯಿ ಹಣವನ್ನು ಸಂಗ್ರಹಿಸಿದ್ದರು ಎಂದು ಆರೋಪಿಸಲಾಗಿದೆ.
ED ದಾಖಲಿಸಿಕೊಂಡಿರುವ ದೂರಿನಲ್ಲಿ ಈ ಮೂವರು ಪ್ರಮುಖ ನಟರೊಂದಿಗೆ ಮಂಚು ಲಕ್ಷ್ಮಿ, ರಾಜ್, ನಿಧಿ ಅಗರವಾಲ್, ಪ್ರಣೀತಾ ಸುಭಾಸ್, ಅನನ್ಯಾ ನಾಗಲ್ಲಾ, ಟಿವಿ ನಿರೂಪಕಿ ಶ್ರೀಮುಖಿ, ಶ್ಯಾಮಲಾ, ವರ್ಷಿಣಿ ಸೌಂದರರಾಜನ್, ಸಿರಿ ಹನುಮಂತು, ವಾಸಂತಿ ಕೃಷ್ಣನ್, ಶೋಭಾ ಶೆಟ್ಟಿ, ಅಮೃತಾ ಚೌಧರಿ, ನಯನಿ ಪಾವನಿ, ನೇಹಾ ಪರಣ್, ಪಾಂಡು, ಪದ್ಮಾವತಿ, ಇಮ್ರಾನ್ ಖಾನ್, ವಿಷ್ಣುಪ್ರಿಯ, ಹರ್ಷಸಾಯಿ, ಭಯ್ಯಾ ಸನ್ನಿ ಯಾದವ್, ಟೇಸ್ಟ್ ತೇಜಾ, ರಿತು ಚೌಧರಿ, ಬಂಡಾರು ಸುಪ್ರಿತಾ ಅವರ ಹೆಸರುಗಳೂ ಇವೆ.
ಈ ಸೆಲೆಬ್ರಿಟಿಗಳು ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳಾದ ಜಂಗಲ್ ರಮ್ಮಿ, ಜೀತ್‌ವಿನ್, ಲೋಟಸ್365 ಸೇರಿದಂತೆ ಹಲವು ಆ್ಯಪ್‌ಗಳ ಪರ ಪ್ರಚಾರ ನಡೆಸಿದ್ದಾರೆ. ಇದಕ್ಕಾಗಿ ಹಣ ಪಡೆದಿದ್ದಾರೆ ಎಂದು ಮೂಲಗಳು ಹೇಳಿವೆ.
ಈ ಆ್ಯಪ್‌ಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದು ತಿಳಿದಿಲ್ಲ ಹಾಗೂ ಕಾನೂನು ಬಾಹಿರವಾದ ಬೆಟ್ಟಿಂಗ್‌ನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿಲ್ಲ’ ಎಂದು ಪ್ರಕರಣದಲ್ಲಿ ಹೆಸರಿರುವ ಕೆಲ ಜನಪ್ರಿಯ ವ್ಯಕ್ತಿಗಳು ಈ ಹಿಂದೆ ಹೇಳಿದ್ದರು ಎಂದು ಮೂಲಗಳು ತಿಳಿಸಿವೆ.

