ಕ್ಯಾಲಿರ್ಫೋನಿಯಾ : ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ(Shubhanshu Shukla) ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ(International Space Station)ದಿಂದ ಭೂಮಿಗೆ ಬಂದಿಳಿದಿದ್ದಾರೆ.
ಶುಭಾಂಶು ಶುಕ್ಲಾ ಸ್ಪೇಸ್‌ಎಕ್ಸ್‌ನ ಡ್ರ್ಯಾಗನ್ ಬಾಹ್ಯಾಕಾಶ ನೌಕೆಯಲ್ಲಿ ಆಕ್ಸಿಯಮ್ -4 ಬಾಹ್ಯಾಕಾಶ ಕಾರ್ಯಾಚರಣೆಯ ಇತರೆ ಮೂವರು ಗಗನಯಾತ್ರಿಗಳೊಂದಿಗೆ ಭೂಸ್ಪರ್ಶ ಮಾಡಿದ್ದಾರೆ. ಡ್ರ್ಯಾಗನ್ ಕ್ಯಾಪ್ಸುಲ್ ಜೂನ್ 15ರ ಮಂಗಳವಾರ ಮಧ್ಯಾಹ್ನ 3.01 ರ ಸುಮಾರಿಗೆ ಭಾರತೀಯ ಸಮಯ ಅಮೆರಿಕದ ಕ್ಯಾಲಿಫೋರ್ನಿಯಾ ಕರಾವಳಿಯ ಬಳಿ ಪೆಸಿಫಿಕ್ ಮಹಾಸಾಗರದಲ್ಲಿ ಲ್ಯಾಂಡ್ ಆಗಿದ್ದಾರೆ.
ಭಾರತಕ್ಕೆ ಶುಭಾಂಶು ಶುಕ್ಲಾ ಅವರ ಈ ಬಾಹ್ಯಾಕಾಶ ಯಾತ್ರೆ ಕೇವಲ ದಾಖಲೆ ಮಾಡುವ ಅವಕಾಶವಾಗಿರಲಿಲ್ಲ, ಇದು ಭವಿಷ್ಯಕ್ಕಾಗಿ ತಯಾರಿಯಾಗಿತ್ತು. ಇದು ಭಾರತದ ಐತಿಹಾಸಿಕ ಬಾಹ್ಯಾಕಾಶ ಜಿಗಿತವಾಗಿತ್ತು. ಈ ಮಿಷನ್ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಭಾರತದ ಕನಸಿನ ಆಧಾರವಾಗಲಿದೆ. ಇಲ್ಲಿಂದ ಭಾರತದ ಗಗನಯಾನ ಕಾರ್ಯಾಚರಣೆಯ ಹಾದಿ ಹೊರಹೊಮ್ಮುತ್ತದೆ.
ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಪೈಲಟ್ ಆಗಿ ಈ ಕಾರ್ಯಾಚರಣೆಯ ಭಾಗವಾಗಿದ್ದಾರೆ. ಇವರೊಂದಿಗೆ ಹಂಗೇರಿಯ ಟಿಬೋರ್ ಕಾಪು ಮತ್ತು ಪೋಲೆಂಡ್‌ನ ಸ್ಲಾವೋಸ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮಿಷನ್ ತಜ್ಞರಾಗಿದ್ದಾರೆ. ಇಡೀ ತಂಡದ ನೇತೃತ್ವವನ್ನು ಅನುಭವಿ ಮಹಿಳಾ ಗಗನಯಾತ್ರಿ ಪೆಗ್ಗಿ ವಿಟ್ಸನ್ ವಹಿಸಿದ್ದಾರೆ. ಪೆಗ್ಗಿ ವಿಟ್ಸನ್ ನಾಸಾದ ಅತ್ಯಂತ ಅನುಭವಿ ಗಗನಯಾತ್ರಿಗಳಲ್ಲಿ ಒಬ್ಬರು.
ಜೂ.25ರಂದು ಆಕ್ಸಿಯಂ-4 ಮಿಷನ್ ಮೂಲಕ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ, ಅಮೆರಿಕ ಮಹಿಳಾ ಗಗನಯಾತ್ರಿ ಪೆಗ್ಗಿ ವಿಟ್ಸನ್, ಹಂಗೇರಿಯ ಟಿಬೋರ್ ಕಾಪು ಹಾಗೂ ಪೋಲೆಂಡ್ ಗಗನಯಾತ್ರಿ ಸ್ಲಾವೋಸ್ಜ್ ಉಜ್ನಾನ್ಸ್ಕಿ ಅಂತರಿಕ್ಷ ಯಾನಕ್ಕೆ ತೆರಳಿದ್ದರು.
8 ಗಂಟೆಗಳ ಪ್ರಯಾಣದ ನಂತರ ಡ್ರ್ಯಾಗನ್ ಬಾಹ್ಯಾಕಾಶ ನೌಕೆ ಜೂನ್ 26 ರಂದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ ಡಾಕ್ ಮಾಡಿತು. ಆದಾಗ್ಯೂ, ಈ ಮಿಷನ್ 14 ದಿನಗಳದ್ದಾಗಿತ್ತು. ಈಗ ಗಗನಯಾತ್ರಿಗಳ ಮರಳುವಿಕೆ ನಾಲ್ಕು ದಿನಗಳ ವಿಳಂಬವಾಗಿದೆ. ಜುಲೈ 6 ರಂದು, ಶುಭಾಂಶು ಅವರು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕೆಲವು ಚಿತ್ರಗಳನ್ನು ಬಿಡುಗಡೆ ಮಾಡಿದ್ದರು.
ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮತ್ತು ಭಾರತೀಯ ಸಂಸ್ಥೆ ಇಸ್ರೋ ನಡುವಿನ ಒಪ್ಪಂದದಡಿಯಲ್ಲಿ, ಭಾರತೀಯ ವಾಯುಪಡೆಯ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಅವರನ್ನು ಈ ಕಾರ್ಯಾಚರಣೆಗೆ ಆಯ್ಕೆ ಮಾಡಲಾಯಿತು. 41 ವರ್ಷಗಳ ಹಿಂದೆ, ಭಾರತದ ರಾಕೇಶ್ ಶರ್ಮಾ 1984 ರಲ್ಲಿ ಸೋವಿಯತ್ ಒಕ್ಕೂಟದ ಬಾಹ್ಯಾಕಾಶ ನೌಕೆಯಲ್ಲಿ ಬಾಹ್ಯಾಕಾಶಕ್ಕೆ ಪ್ರಯಾಣ ಬೆಳೆಸಿದ್ದರು.

