ರಾಮನಗರದ ಚನ್ನಪಟ್ಟಣ ತಾಲೂಕಿನ ಕೆಲಗೆರೆ ಗ್ರಾಮದಲ್ಲಿ ಡಿಜಿಟಲ್ ಅರೆಸ್ಟ್ ಎಂದು ಬೆದರಿಸಿ ಲಕ್ಷಾಂತರ ರೂಪಾಯಿ ವಂಚನೆ ಮಾಡಿದ್ದಲ್ಲದೆ, ಮತ್ತೆ ಹಣಕ್ಕೆ ಬೇಡಿಕೆಯಿಟ್ಟ ಹಿನ್ನಲೆ ಬೆಸ್ಕಾಂ ಸಿಬ್ಬಂದಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಮೃತ ದುರ್ದೈವಿಯನ್ನು ಕುಮಾರ್ (42) ಎಂದು ಗುರುತಿಸಲಾಗಿದೆ. ನಗರದ ಹೆಚ್‌ಎಸ್‌ಆರ್ ಲೇಔಟ್‌ನಲ್ಲಿ ಬೆಸ್ಕಾಂ ಹೊರಗುತ್ತಿಗೆ ನೌಕರರನಾಗಿ ಕೆಲಸ ಮಾಡುತ್ತಿದ್ದ ಅವರಿಗೆ ವಿಕ್ರಮ್ ಗೋಸ್ವಾಮಿ ಎಂಬಾತ ವೀಡಿಯೋ ಕಾಲ್ ಮಾಡಿ ತಾನು ಸಿಬಿಐ ಅಧಿಕಾರಿ ಎಂದು ಸುಳ್ಳು ಹೇಳಿ ಕರೆ ಮಾಡಿದ್ದ..
ತಾನೊಬ್ಬ ಸಿಬಿಐ ಅಧಿಕಾರಿ ನೀವು ವಂಚನೆ ಪ್ರಕರಣದಲ್ಲಿ ಡಿಜಿಟಲ್ ಅರೆಸ್ಟ್ ಆಗಿದ್ದೀರಿ.. ಕೇಸ್‌ನಿಂದ ಪಾರಾಗಬೇಕಾದರೆ ಈ ಕೂಡಲೇ ಅಕೌಂಟ್ ಗೆ ಹಣ ಹಾಕುವಂತೆ ಹೇಳಿದ್ದ.. ವಂಚಕನ ಮತನನ್ನು ನಂಬಿದ ಕುಮಾರ್ ತನ್ನ ಬಳಿ ಇದ್ದ ಸುಮಾರು 11 ಲಕ್ಷ ರೂಪಾಯಿ ಹಣವನ್ನು ಅಕೌಂಟ್ ಗೆ ಹಾಕಿದ್ದ..
ಇಷ್ಟಕ್ಕೆ ಸುಮ್ಮನಾಗದ ವಂಚಕ ಇನ್ನಷ್ಟು ಹಣ ನೀಡುವಂತೆ ಪದೇ ಪದೇ ಒತ್ತಾಯಿಸಿದ್ದಾನೆ. ಇದರಿಂದ ಬೇಸತ್ತ ಕುಮಾರ್ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಎಂ.ಕೆ.ದೊಡ್ಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಡೆತ್ ನೋಟ್ ವಶಪಡಿಸಿಕೊಂಡಿದ್ದಾರೆ.
ಇನ್ನು ಕುಮಾರ್ ಡೆತ್ ನೋಟ್ ನಲ್ಲಿ ವಿಕ್ರಂ ಗೋಸ್ವಾಮಿ ಎಂಬಾತ ನನಗೆ ಸಿಬಿಐ ಎಂದು ಫೋನ್ ಮಾಡಿ ನಿನ್ನ ಮೇಲೆ ಅರೆಸ್ಟ್ ವಾರೆಂಟ್ ಇದೆ ಎಂದು ಬೆದರಿಸಿ ನಿನ್ನನ್ನು ಬಂಧಿಸಲಾಗುವುದು ಎಂದು ಹೇಳಿದ್ದಾನೆ.
ಬಳಿಕ ಕೇಸ್ ನಲ್ಲಿ ಪಾರಾಗಬೇಕು ಎಂದಾದರೆ ನನ್ನ ಅಕೌಂಟಿಗೆ 1,95,000 ರೂ. ಹಾಕು ಎಂದು ಅಕೌಂಟ್ ಸಂಖ್ಯೆಯನ್ನು ಕಳುಹಿಸಿದ್ದಾನೆ. ಆತನ ಮಾತನ್ನು ಕೇಳಿ ಭಯದಿಂದ ಕೇಳಿದಷ್ಟು ಹಣವನ್ನು ಹಾಕಿದ್ದಾನೆ. ಬಳಿಕ ಮತ್ತೆ ಮತ್ತೆ ಕರೆ ಮಾಡಿ ಹಣ ಹಾಕು ಎಂದು ಸುಮಾರು 11 ಲಕ್ಷ ಹಾಕಿಸಿಕೊಂಡಿದ್ದಾರೆ.
ಅಷ್ಟೇ ಅಲ್ಲದೆ, ನನ್ನ ಪರ್ಸನಲ್ ನಂಬರ್ ಹಾಗೂ ವಾಟ್ಸಪ್ ನಂಬರ್‌ಗೆ 2,75,000 ರೂ. ಕಳುಹಿಸು ಎಂದು ಕಿರಿ ಕಿರಿ ಮಾಡುತ್ತಿದ್ದಾನೆ. ಇದರಿಂದ ಮನನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಕುಮಾರ್ ಬರೆದಿದ್ದಾರೆ.
ಸದ್ಯ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಸೈಬರ್ ಕ್ರೈಮ್ ಹಂತದಲ್ಲಿ ಪ್ರಕರಣ ಬರುವುದರಿಂದ ಕೇಸ್ ಅನ್ನು ಸೈಬರ್ ಕ್ರೈಮ್ ಗೆ ವರ್ಗಾವಣೆ ಮಾಡಲಾಗಿದೆ.

