ಬೆಂಗಳೂರು: ಜೂನಿಯರ್ ಸಿನಿಮಾ ಮೂಲಕ ರಾಜಕಾರಣಿ ಜನಾರ್ದನ ರೆಡ್ಡಿ ಅವರ ಪುತ್ರ ಕಿರೀಟಿ ಸಿನಿರಂಗಕ್ಕೆ ಕಾಲಿಟ್ಟಿದ್ದಾರೆ. ಮೊದಲ ಸಿನಿಮಾದಲ್ಲೇ ಎಲ್ಲಾ ನಾಯಕರು ಗೆಲ್ಲೋದಿಲ್ಲ ನಿಜ. ಆದರೆ ಕಿರೀಟಿ ಇದನ್ನು ಸುಳ್ಳು ಮಾಡಿದ್ದಾರೆ. ಕಿರೀಟಿಯ ಮೊದಲ ಸಿನಿಮಾ ಜೂನಿಯರ್ ಮೊದಲ ದಿನವೇ ಒಳ್ಳೆಯ ಕಲೆಕ್ಷನ್ ಮಾಡಿದೆ.
ಕಿರೀಟಿ ತಂದೆ ಜನಾರ್ಧನ ರೆಡ್ಡಿ ಅವರ ಪರಿಚಯ ಕನ್ನಡ ಹಾಗೂ ತೆಲುಗು ಎರಡೂ ಭಾಷಿಗರಿಗೆ ಪರಿಚಯ ಇರುವುದರಿಂದ ಇವೆರಡು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಿದೆ. ಚಿತ್ರದಲ್ಲಿ ಕಿರೀಟಿ ಜೊತೆ ಶ್ರೀಲೀಲಾ, ರವಿಚಂದ್ರನ್, ಜೆನಿಲಿಯಾ ಸೇರಿದಂತೆ ಖ್ಯಾತ ನಟರು ನಟಿಸಿ ಮೆರುಗು ನೀಡಿದ್ದಾರೆ.
ಅಂದಹಾಗೆ ಜೂನಿಯರ್ ಸಿನಿಮಾದ ಮೊದಲ ದಿನದ ಗಳಿಕೆ 1.40 ಕೋಟಿ ರೂಪಾಯಿ ಎನ್ನಲಾಗಿದೆ. ರಿಲೀಸ್ ಆದ ಎರಡೂ ಭಾಷೆಗಳಲ್ಲೂ ಸಿನಿಮಾ ಒಳ್ಳೆಯ ಕಲೆಕ್ಷನ್ ಮಾಡಿದ್ದು, ಒಟ್ಟಿನಲ್ಲಿ ಚಿತ್ರ ಗೆಲ್ಲುವ ಸೂಚನೆಯಂತೂ ನೀಡಿದೆ. ಮೊದಲ ದಿನದ ಗಳಿಕೆ ಕಡಿಮೆ ಎನಿಸಿದರೂ ನಾಯಕನ ಮೊದಲ ಸಿನಿಮಾ ಆಗಿರುವುದರಿಂದ ಇತರ ಸಿನಿಮಾಗಳಿಗೆ ಹೋಲಿಸಿದರೆ ಸಿನಿಮಾ ಸಕ್ಸಸ್ ಎನಿಸಿದೆ.
ಇದೀಗ ಕಿರೀಟಿ ಸಾಮಾಜಿಕ ಜಾಲತಾಣದ ವೇದಿಕೆ ಎಕ್ಸ್‌ನಲ್ಲಿ ಬರೆದುಕೊಂಡು ಪ್ರೇಕ್ಷಕರಿಗೆ ಧನ್ಯವಾದ ತಿಳಿಸಿದ್ದಾರೆ. “ಕನ್ನಡ ಸಿನಿ ಪ್ರೇಕ್ಷಕರ ಪಾದಗಳಿಗೆ ನನ್ನ ವಂದನೆಗಳು. ಜೂನಿಯರ್ ಗೆ ನೀವು ತೋರಿಸುತ್ತಿರುವ ಪ್ರೇಮ, ಆತ್ಮೀಯತೆಯನ್ನು ನೋಡುತ್ತಿದ್ದರೆ ನನಗೆ ಬಹಳ ಆನಂದವಾಗುತ್ತಿದೆ. ನನ್ನನ್ನು ನಿಮ್ಮಲ್ಲಿ ಒಬ್ಬನಾಗಿ ಸ್ವೀಕರಿಸಿದ್ದಕ್ಕಾಗಿ ತಮಗೆಲ್ಲರಿಗೂ ಹೃದಯಪೂರ್ವಕ ಕೃತಜ್ಞತೆಗಳು. ನಿಮ್ಮ ಕಿರೀಟಿ.” ಎಂದು ಅವರು ಬರೆದಿದ್ದಾರೆ.

