ಮಂಡ್ಯ : ಮೈಸೂರಿನಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶಕ್ಕೆ ತೆರಳಿದ್ದ ಡಿಸಿಎಂ ಡಿ.ಕೆ ಶಿವಕುಮಾರ್ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದಾಗ ಅವರ ಬೆಂಗಾವಲು ವಾಹನ ಅಪಘಾತಕ್ಕೀಡಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ವ್ಯಾಪ್ತಿಯ ಗೌಡಹಳ್ಳಿ ಟಿಎಂ ಹೊಸೂರು ಬಳಿಯ ಬೆಂ-ಮೈ ಎಕ್ಸ್‌ಪ್ರೆಸ್ ಹೈವೆಯಲ್ಲಿ ಬರುತ್ತಿದ್ದ ವೇಳೆ ಡಿಸಿಎಂರವರ ಬೆಂಗಾವಲು ವಾಹನ ಪಲ್ಟಿಯಾಗಿದೆ.
ಡಿಸಿಎಂ ಡಿಕೆಶಿಯವರು ಮೈಸೂರಿನ ಸಾಧನಾ ಸಮಾವೇಶ ಮುಗಿಸಿ ಬೆಂಗಳೂರಿಗೆ ತೆರಳುತ್ತಿದ್ದರು. ಈ ವೇಳೆ ಎಸ್ಕಾರ್ಟ್ ವಾಹನವು ಡಿವೈಡರ್ ಡಿಕ್ಕಿಯಾಗಿ ಪಲ್ಟಿಯಾಗಿದೆ. ಘಟನೆಯಿಂದ ಕಾರಿನಲ್ಲಿದ್ದ ಎಸ್ಕಾರ್ಟ್ ಇಬ್ಬರು ಸಿಬ್ಬಂದಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಎಸ್ಕಾರ್ಟ್ ವಾಹನ ಹಿಂಬಾಲಿಸುತ್ತಿದ್ದ ಡಿಕೆಶಿ ಕುಳಿತಿದ್ದ ಕಾರ್‌ಗೆ ಯಾವುದೇ ಅಪಾಯವಾಗಿಲ್ಲ. ಸಿಬ್ಬಂದಿ ಆಸ್ಪತ್ತ್ಎಗೆ ರವಾನೆಯಾದ ನಂತರ ಡಿ.ಕೆ ಶಿವಕುಮಾರ್ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ.
2028ಕ್ಕೂ ಆಶೀರ್ವದಿಸಿ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಿ :
ಬೆಂಗಳೂರಿಗೆ ತೆರಳುವ ಮುನ್ನ ಸಾಧನಾ ಸಮಾವೇಶದಲ್ಲಿ ಮಾತನಾಡಿದ ಡಿ.ಕೆ ಶೀವಕುಮಾರ್, 2028ಕ್ಕೂ ಆಶೀರ್ವದಿಸಿ, ಕರ್ನಾಟಕದಲ್ಲಿ ಕಾಂಗ್ರೆಸ್ ಗೆಲ್ಲಿಸಿ ಎಂದಿದ್ದಾರೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿ ಹಲವು ಕಾಂಗ್ರೆಸ್ ನಾಯಕರು ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ 2,600 ಕೋಟಿ ವೆಚ್ಚದ ಕಾಮಗಾರಿಗೆ ಗುದ್ದಲಿ ಪೂಜೆ ಮತ್ತು ಲೋಕಾರ್ಪಣೆಯನ್ನು ಸಿಎಂ ಸಿದ್ಧರಾಮಯ್ಯ ನೆರವೇರಿಸಿದ್ದಾರೆ.
ಇಂದಿನ ಸಾಧನಾ ಸಮಾವೇಶದ ಮೂಲಕ ಹಳೇ ಮೈಸೂರು ಭಾಗದಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದಿಂದ ಶಕ್ತಿ ಪ್ರದರ್ಶನ ನಡೆಸುತ್ತಿದ್ದು, ‘2023ರ ವಿಧಾನಸಭೆ ಚುನಾವಣೆಯಲ್ಲಿ ಮತದಾರರು ನಮ್ಮ ಕೈಹಿಡಿದಿದ್ದಾರೆ. ಆ ಋಣ ತೀರಿಸುವ ಸದವಕಾಶ ಸಿಕ್ಕಿದೆ. ಗ್ಯಾರಂಟಿಗಳನ್ನು ನೀಡಿ, ಮತದಾರರ ಆಶಯ ಈಡೇರಿಸುತ್ತಿದ್ದೇವೆ. 2028ರಲ್ಲೂ ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಚುನಾವಣೆ ಎದುರಿಸಲಿದ್ದು, ನಮಗೆ ಆಶೀರ್ವದಿಸಿ. ಕರುನಾಡಿನ ಸೇವೆ ಮಾಡುವ ಅವಕಾಶ ಕೊಡಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

