ಮೈಸೂರು: ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಹಾಗೂ ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್ ಅವರ ವಿರುದ್ಧ ಜಾರಿ ನಿರ್ದೇಶನಾಲಯ(ಇ.ಡಿ.) ನೀಡಿದ್ದ ಸಮನ್ಸ್ ಅನ್ನು ರದ್ದುಗೊಳಿಸಿದ್ದ ಹೈಕೋರ್ಟ್ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಇದರೊಂದಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ 50:50 ಅನುಪಾತದ ಹಗರಣ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಕುಟುಂಬ ಇ.ಡಿ. ತನಿಖೆಯಿಂದ ಪಾರಾದಂತೆ ಆಗಿದೆ. ಜತೆಗೆ ಖುದ್ದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರೇ, ‘ರಾಜಕೀಯನ್ನು ಚುನಾವಣೆಯಲ್ಲಿ ಇಟ್ಟುಕೊಳ್ಳಿ. ಅದಕ್ಕಾಗಿ ಇ.ಡಿ.ಯನ್ನೇಕೆ ಬಳಸುತ್ತೀರಿ’ ಎಂದಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಮುಡಾದಿಂದ 50:50 ಅನುಪಾತದಡಿ ಪರ್ಯಾಯ ನಿವೇಶನಗಳ ರೂಪದಲ್ಲಿ ಸಿಎಂ ಸಿದ್ದರಾಮಯ್ಯ ಪತ್ನಿ ಬಿ.ಎಂ.ಪಾರ್ವತಿ ಅವರು 14 ಸೈಟ್‌ಗಳನ್ನು ಪಡೆದುಕೊಂಡಿದ್ದರು. ಈ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಇ.ಡಿ. ವಿಚಾರಣೆಗೆ ಹಾಜರಾಗುವಂತೆ ಬಿ.ಎಂ.ಪಾರ್ವತಿ ಹಾಗೂ ಭೈರತಿ ಸುರೇಶ್ ಅವರಿಗೆ ಸಮನ್ಸ್ ಜಾರಿಗೊಳಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಹೈಕೋರ್ಟ್ ನೋಟಿಸ್ ರದ್ದುಗೊಳಿಸಿ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ಇ.ಡಿ. ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.
ಮೇಲ್ಮನವಿ ವಿಚಾರಣೆ ನಡೆಸಿದ ಸಿಜೆಐ ಬಿ.ಆರ್.ಗವಾಯಿ, ‘ಬಾಯಿ ತೆರೆಯಲು ನಮಗೆ ಬಲವಂತ ಮಾಡಬೇಡಿ. ಇಲ್ಲವಾದರೆ ನೀವು(ಇ.ಡಿ.) ಕಠಿಣ ಟೀಕೆಗಳನ್ನು ಎದುರಿಸಬೇಕಾಗುತ್ತದೆ. ಮಹಾರಾಷ್ಟ್ರದಲ್ಲಿ ನಮಗೂ ಇದರ ಬಗ್ಗೆ ಕೆಲವು ಅನುಭವಗಳಾಗಿವೆ. ದೇಶಾದ್ಯಂತ ನೀವು ಇದನ್ನು ಮುಂದುವರಿಸಬಾರದು’ ಎಂದು ಇ.ಡಿ.ಪರವಾಗಿ ಹಾಜರಿದ್ದ ಹೆಚ್ಚುವರಿ ಸಾಲಿಟರಿ ಜನರಲ್ ರಾಜು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

